ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿ​ಎಂಸಿ ಕಾಯ್ದೆ ಹಿಂಪಡೆಯಲು ನಿರ್ಧಾ​ರ: ಸಚಿವ ಎಚ್‌.ಕೆ. ಪಾಟೀಲ

ಬೆಂಗಳೂರು : ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಎಪಿಎಂಸಿ ಕಾಯ್ದೆಯ ಬದಲಾಗಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆದು ಮೂಲ ಕಾಯ್ದೆಯನ್ನು ಮತ್ತಷ್ಟು ಸುಧಾರಣೆಗಳೊಂದಿಗೆ ಮರು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಜುಲೈ 3ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಸುಧಾರಿತ ಎಪಿಎಂಸಿ ಮಸೂದೆ ಮಂಡಿಸಲು ತೀರ್ಮಾನಿಸಿದೆ.
ಪ್ರಸ್ತುತ ಇರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡಿ ಮೂಲ ಎಪಿಎಂಸಿ ಕಾಯ್ದೆಯನ್ನು ಸುಧಾರಿತ ರೂಪದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಜವಳಿ ಮತ್ತು ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಅವರು ಬುಧವಾರ ಉನ್ನತ ಮಟ್ಟದ ಸಭೆ ನಡೆ​ಸಿ​ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ಕೆ. ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರು, ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಮೂಲ ಕರ್ನಾಟಕ ಎಪಿಎಂಸಿ ಕಾಯ್ದೆಯ ಎಲ್ಲ ಆಶಯಗಳನ್ನು ಹೊಂದಿರುವ ಸುಧಾರಿತ ಎಪಿಎಂಸಿ ಮಸೂ​ದೆಯನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.

ಪ್ರಮುಖ ಸುದ್ದಿ :-   ಕಡೂರು| ದುಷ್ಕರ್ಮಿಗಳಿಂದ ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

ಬಿಜೆಪಿ ಜಾರಿಗೊಳಿಸಿದ್ದ ತಿದ್ದುಪಡಿ ಕಾಯ್ದೆಯಿಂದ ಎಂಪಿಎಂಸಿ ಚೌಕಟ್ಟಿನಲ್ಲಿ ನಡೆಯಬೇಕಿದ್ದ ಉತ್ಪನ್ನ ಮಾರಾಟ ವ್ಯವಸ್ಥೆಯನ್ನು ಮುಕ್ತಗೊಳಿಸಲಾಯಿತು. ಆದರೆ, ಅದರಿಂದ ವ್ಯಾಪಾರಿಗಳಿಗೂ ಅನುಕೂಲವಾಗಲಿಲ್ಲ. ರೈತರ ಉತ್ಪನ್ನಗಳಿಗೆ ಹೆಚ್ಚಿನ ದರ ಸಿಗಲಿಲ್ಲ. ಹಮಾಲಿಗಳು ಸಂಕಷ್ಟಕ್ಕೆ ಒಳಗಾದರು. ತಿದ್ದುಪಡಿ ಕಾಯ್ದೆಗೂ ಮುನ್ನ ವಾರ್ಷಿಕ 650 ರಿಂದ 680 ಕೋಟಿ ರು. ಆದಾಯ ಗಳಿಸುತ್ತಿದ್ದ ಎಂಪಿಎಂಸಿಗಳ ಗಳಿಕೆ ತಿದ್ದುಪಡಿ ಕಾಯ್ದೆಯ ನಂತರ 200 ಕೋಟಿಗೆ ಇಳಿಕೆ ಕಂಡಿದೆ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಈ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂಬುದು ರೈತ ಸಮೂಹ ಒತ್ತಾಯಿಸುತ್ತಿದ್ದು, ಇದಕ್ಕೆ ಪೂರಕವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಸುಧಾರಿತ ಎಪಿಎಂಸಿ ಕಾಯ್ದೆ ಜಾರಿಗಾಗಿ ಜೂನ್‌ 21ರಂದು ತಜ್ಞರೊಂದಿಗೆ ಸಭೆ ನಡೆಸಿ ಕಾಯ್ದೆ ಅಂತಿಮಗೊ​ಳಿಸಿ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅವರು ತಿಳಿಸಿದರು. ನೂತನ ಸುಧಾರಿತ ಎಪಿಎಂಸಿ ಕಾಯ್ದೆಯು ಹಾಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಖಾಸಗಿ ಮಾರುಕಟ್ಟೆಗಳನ್ನು ಒಳಗೊಂಡು ರೈತರ ಹಿತ ಕಾಯುವ ಅಂಶಗಳನ್ನು ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement