ಖ್ಯಾತ ನಟಿ ರಶ್ಮಿಕಾ ಮಂದಣ್ಣ ತಮ್ಮ ಆಪ್ತ ಸಹಾಯಕನಿಂದಲೇ ವಂಚನೆಗೊಳಗಾಗಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಕಳೆದ ಕೆಲ ವರ್ಷಗಳಿಂದ ನಟಿಗೆ ಆಪ್ತ ಸಹಯಾಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬರೋಬ್ಬರಿ 80 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾನೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
2016ರಲ್ಲಿ ತೆರೆಕಂಡಿದ್ದ ಕನ್ನಡದ ʼಕಿರಿಕ್ ಪಾರ್ಟಿʼ ಸಿನಿಮಾ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ್ದ ರಶ್ಮಿಕಾ ಮಂದಣ್ಣ, ಆರೇಳು ವರ್ಷಗಳ ಅವಧಿಯಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ನಟಿಯಾಗಿ ಜನಪ್ರಿಯತೆ ಗಳಿಸಿದ್ದಾರೆ. ರಶ್ಮಿಕಾ, ತಮ್ಮ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುವ ಸಲುವಾಗಿ ಆಪ್ತ ಸಹಾಯಕನನ್ನು ನೇಮಿಸಿಕೊಂಡಿದ್ದರು. ಇದೇ ವ್ಯಕ್ತಿ ಸದ್ಯ 80 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾನೆ. ಈ ವಿಚಾರ ತಿಳಿಯುತ್ತಲೇ ರಶ್ಮಿಕಾ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ರಶ್ಮಿಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ರಾಷ್ಟ್ರೀಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಂಚನೆಯ ಸುದ್ದಿ ಹರಿದಾಡಿದ ಬಳಿಕವೂ ರಶ್ಮಿಕಾ ಸ್ಪಷ್ಟನೆ ನೀಡಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ