ಉಡುಪಿ ಮಠದ ಪೇಜಾವರ ಶ್ರೀಗಳು ಸುಮಾರು 40 ಅಡಿ ಆಳದ ಬಾವಿಗಿಳಿದು ಬೆಕ್ಕಿನ ಮರಿಯ ರಕ್ಷಣೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಬೆಕ್ಕನ್ನು ರಕ್ಷಿಸಲು ಸ್ವತಃ ಸ್ವಾಮೀಜಿ ಬಾವಿಗೆ ಇಳಿದಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ನಗರದ ಹೊರವಲಯದಲ್ಲಿರುವ ಮುಚ್ಲಕೋಡು ದೇವಸ್ಥಾನಕ್ಕೆ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು (Pejawar Sri) ಭೇಟಿ ಮಾಡಿದ್ದರು. ಆಗ ಅಲ್ಲಿ ಬೆಕ್ಕೊಂದು ಬಾವಿಗೆ ಬಿದ್ದ ವಿಷಯ ಸ್ವಾಮೀಜಿಗೆ ಗೊತ್ತಾಗಿದೆ. ಬಾವಿಗೆ ಬೆಕ್ಕೊಂದು ಬಿದ್ದಿರುವ ಬಗ್ಗೆ ದೇವಾಲಯದ ಸಿಬ್ಬಂದಿ ಮಾಹಿತಿ ನೀಡಿದರು. ಕೂಡಲೇ ಕಾರ್ಯ್ರಪ್ರವೃತ್ತರಾದ ಸ್ವಾಮೀಜಿ ತಕ್ಷಣ ಸ್ವಾಮೀಜಿ ಅವರು ಬಾವಿಯ ನೀರು ಸೇದುವ ಹಗ್ಗವನ್ನು ಹಿಡಿದುಕೊಂಡು ಸುಮಾರು 40 ಅಡಿ ಆಳದ, 4-5 ಅಡಿ ಅಗಲದ ಕಲ್ಲು ಕಟ್ಟಿರುವ ಬಾವಿಗೆ ಇಳಿದರು.
ಬೆಕ್ಕು ಹೆದರಿಕೆಯಿಂದ ಬೆಕ್ಕು ಉಗುರಿನಿಂದ ಪರಚಬಾರದು ಎಂದು ಕೈಗೆ ಬಟ್ಟೆಯೊಂದನ್ನು ಗ್ಲೌಸ್‌ನಂತೆ ಸುತ್ತಿಕೊಂಡರು. ಬಾವಿಯ ಆಳಕ್ಕೆ ಇಳಿದ ಶ್ರೀಗಳು ಜೀವಭಯದಿಂದ ಬಾವಿಯೊಳಗೆ ಕಲ್ಲಿನ ಅಟ್ಟೆಮೇಲೆ ಕೂಗುತ್ತ ಕುಳಿತಿದ್ದ ಬೆಕ್ಕನ್ನು ಜಾಗ್ರತೆಯಿಂದ ಹಿಡಿದು ಹಗ್ಗಕ್ಕೆ ಕಟ್ಟಿದ್ದ ಬಕೆಟ್‌ಗೆ ಹಾಕಿದರು.
ಆದರೆ ಸಿಬ್ಬಂದಿ ಬಕೆಟ್ ಅನ್ನು ಅರ್ಧಕ್ಕೆ ಎಳೆಯುವಷ್ಟರಲ್ಲಿ ಬೆಕ್ಕು ಹೆದರಿ ಪುನಃ ಬಾವಿಗೆ ಹಾರಿತು. ಅರ್ಧಕ್ಕೆ ಏರಿದವರು ಪುನಃ ಕೆಳಗಿಳಿದು ಮತ್ತೆ ಬೆಕ್ಕನ್ನು ಹಿಡಿದರು. ಆದರೆ ಈ ಬಾರಿ ಬೆಕ್ಕನ್ನು ಬಕೆಟ್‌ಗೆ ಹಾಕದೆ ತಾವೇ ಒಂದು ಕೈಯಲ್ಲಿ ಬೆಕ್ಕನ್ನು ಹಿಡಿದು, ಇನ್ನೊಂದು ಕೈಯಲ್ಲಿ ಹಗ್ಗವನ್ನು ಹಿಡಿದು ಬಹು ಸಾಹಸದಿಂದ ಬಾವಿಯಿಂದ ಮೇಲಕ್ಕೆ ಬಂದರು. ಹಾಗೂ ಜೊತೆಗೆ ಬೆಕ್ಕನ್ನು ತಂದರು.
ಗೋವಿನ ರಕ್ಷಣೆಗೆ ಮುಂಚೂಣಿಯಲ್ಲಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾವು, ಹದ್ದು, ಜಲಚರಗಳು ಸೇರಿದಂತೆ ಅನೇಕ ಪ್ರಾಣಿಗಳ ಪಕ್ಷಿಗಳ ರಕ್ಷಣೆ ಮಾಡಿದ್ದಾರೆ.
ಇತ್ತೀಚೆಗೆ ಅವರು ಎತ್ತರದ ಹಲಸಿನ ಮರ ಹತ್ತಿ ಹಲಸಿನ ಕಾಯಿ ಕೊಯ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಫಿಟ್ನೆಸ್ ಜತೆಗೆ ಅತಿಯಾದ ಜೀವನೋತ್ಸಾಹವನ್ನು ಹೊಂದಿರುವ ಸ್ವಾಮೀಜಿಯವರ ಪ್ರಾಣಿ ಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅದರ ವೀಡಿಯೋ – ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಿಮ್ಮ ಕಾಮೆಂಟ್ ಬರೆಯಿರಿ