ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ‘ಹೆಚ್ಚಿನ ಪಿಂಚಣಿ’ ಯೋಜನೆಗೆ (Higher Pension) ನೋಂದಾಯಿಸಿಕೊಳ್ಳಲು ವಿಧಿಸಿದ್ದ ಜೂನ್ 26ರ ಗಡುವನ್ನು ಜುಲೈ 11ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಮೊದಲು ಮಾರ್ಚ್ 3, ಮೇ 3 ಮತ್ತು ಜೂನ್ 26ನೇ ತಾರೀಖುಗಳನ್ನು ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ದಿನಾಂಕ ವಿಸ್ತರಿಸಿತ್ತು. ಪಿಂಚಣಿ ಪಡೆಯುವ ವಿಚಾರದಲ್ಲಿ ಹಲವು ಭವಿಷ್ಯ ನಿಧಿ ಹೂಡಿಕೆದಾರರು ಅನುಭವಿಸುತ್ತಿದ್ದ ತೊಂದರೆ ಪರಿಹರಿಸುವ ಉದ್ದೇಶದಿಂದ ‘ಹೆಚ್ಚಿನ ಪಿಂಚಣಿ’ ಯೋಜನೆಯನ್ನು ಇಪಿಎಫ್ಒ ಆರಂಭಿಸಿತ್ತು. ಆದರೆ ನೋಂದಣಿ ವಿಚಾರದಲ್ಲಿ ಕೆಲವರಿಗೆ ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಹಲವು ಬಾರಿ ಗಡುವು ವಿಸ್ತರಿಸಲು ಇಪಿಎಫ್ಒ ಮುಂದಾಗಿತ್ತು. ಇದೀಗ ಮತ್ತೊಮ್ಮೆ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸುವ ಮೂಲಕ ಸೆಪ್ಟೆಂಬರ್ 1, 2014ಕ್ಕೂ ಮೊದಲು ಭವಿಷ್ಯ ನಿಧಿ ಸಂಘಟನೆಯ ಚಂದಾದಾರಾಗಿದ್ದ ಕಾರ್ಮಿಕರಿಗೆ ಈ ಯೋಜನೆಯ ಲಾಭ ಪಡೆಯಲು ಅವಕಾಶ ಕಲ್ಪಿಸಿತ್ತು. ಆದೇಶ ಹೊರಡಿಸಿದ ನಾಲ್ಕು ತಿಂಗಳ ಒಳಗೆ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು.
ಹೆಚ್ಚಿನ ಪಿಣಚಣಿ ಯೋಜನೆಯ ಸೌಲಭ್ಯ ಪಡೆಯಲು ಕಾರ್ಮಿಕರ ಭವಿಷ್ಯ ನಿಧಿಗೆ ವಂತಿಕೆ ಪಾವತಿಸಿದ ದಾಖಲೆ, ಯೂನಿವರ್ಸಲ್ ಅಕೌಂಟ್ ನಂಬರ್ (universal account number – UAN), ನಿವೃತ್ತರಾಗಿದ್ದರೆ ಪೆನ್ಷನ್ ಪೇಮೆಂಟ್ ಆರ್ಡರ್ (pension payment order – PPO) ಪ್ರತಿಗಳನ್ನು ಹಾಜರುಪಡಿಸಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ