ಲಕ್ನೋ: ‘ಆದಿಪುರುಷ’ ಚಿತ್ರದ ಸಂಭಾಷಣೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಪ್ರೇಕ್ಷಕರನ್ನು ಕೆರಳಿಸಿರುವ ಕುರಿತು ಅಲಹಾಬಾದ್ ಹೈಕೋರ್ಟ್ ಇಂದು, ಮಂಗಳವಾರ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಸಹ ಲೇಖಕ ಮನೋಜ ಮುಂತಶಿರ್ ಶುಕ್ಲಾ ಅವರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ ಹಾಗೂ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಾಹಸಮಯ ಚಿತ್ರ ಎಂದು ಹೇಳಿಕೊಳ್ಳುವ ‘ಆದಿಪುರುಷ’ ಸಿನೆಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
“ಚಿತ್ರದಲ್ಲಿನ ಸಂಭಾಷಣೆಗಳ ಸ್ವರೂಪವು ಒಂದು ದೊಡ್ಡ ಸಮಸ್ಯೆಯಾಗಿದೆ. ರಾಮಾಯಣವು ನಮಗೆ ಒಂದು ಮಾದರಿಯಾಗಿದೆ. ಜನರು ಮನೆಯಿಂದ ಹೊರಡುವ ಮೊದಲು ರಾಮಚರಿತಮಾನಸ ಓದುತ್ತಾರೆ. ಚಲನಚಿತ್ರಗಳು ಕೆಲವು ವಿಷಯಗಳನ್ನು ಮುಟ್ಟಬಾರದು ಎಂದು ಪೀಠ ಹೇಳಿದೆ..
ಈ ವಿಷಯದ ಬಗ್ಗೆಯೂ ನಾವು ಕಣ್ಣುಮುಚ್ಚಿ ಕುಳಿತರೆ, ಈ ಧರ್ಮದ ಜನರು ತುಂಬಾ ಸಹಿಷ್ಣುಗಳು ಎಂದು ಹೇಳಲಾಗುತ್ತದೆ, ಇದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆಯೇ? ಎಂದು ಪೀಠವು ಟೀಕಿಸಿತು..
ಸೆನ್ಸಾರ್ ಮಂಡಳಿ ಎಂದು ಕರೆಯಲ್ಪಡುವ ಚಲನಚಿತ್ರ ಪ್ರಮಾಣೀಕರಣ ಪ್ರಾಧಿಕಾರವು ತನ್ನ ಜವಾಬ್ದಾರಿಯನ್ನು ಪೂರೈಸಿದೆಯೇ ಎಂದು ಈ ವೇಳೆ ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿದೆ.
“ಸಿನಿಮಾ ನೋಡಿದ ಜನರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿಲ್ಲ ಎಂಬುದು ಒಳ್ಳೆಯ ವಿಚಾರ. ಹನುಮಂತ, ರಾಮ, ಲಕ್ಷ್ಮಣ, ಮತ್ತು ಸೀತೆ ಇವರನ್ನು ಏನೂ ಅಲ್ಲ ಎಂಬಂತೆ ತೋರಿಸಲಾಗಿದೆ. ಈ ವಿಷಯಗಳನ್ನು ಮೊದಲಿನಿಂದಲೂ ತೆಗೆದುಹಾಕಬೇಕಾಗಿತ್ತು. ಅಂತಹ ಚಲನಚಿತ್ರಗಳನ್ನು ವೀಕ್ಷಿಸುವುದು ತುಂಬಾ ಕಷ್ಟ ”ಎಂದು ನ್ಯಾಯಾಲಯವು ಗಮನಿಸಿತು. ಇದು ಅತ್ಯಂತ ಗಂಭೀರ ವಿಷಯ ಎಂದು ಹೇಳಿರುವ ಅವರು, ಸೆನ್ಸಾರ್ ಮಂಡಳಿ ಈ ಬಗ್ಗೆ ಏನು ಮಾಡಿದೆ ಎಂದು ಪ್ರಶ್ನಿಸಿದೆ.
ಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು. ಆಗ ಸೆನ್ಸಾರ್ ಮಂಡಳಿಯು ಏನು ಮಾಡುತ್ತಿದೆ ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ಅವರನ್ನು ನ್ಯಾಯಾಲಯ ಕೇಳಿದೆ.
“ನೀವು ದೃಶ್ಯಗಳನ್ನು ಏನು ಮಾಡುತ್ತೀರಿ? ಸೂಚನೆಗಳನ್ನು ಕೇಳಿ, ನಂತರ ನಾವು ಏನು ಮಾಡಬೇಕೆಂದು ಬಯಸುತ್ತೇವೆಯೋ ಅದನ್ನು ನಾವು ಖಂಡಿತವಾಗಿ ಮಾಡುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ಚಿತ್ರದಲ್ಲಿ ಡಿಸ್ಕ್ಲೇಮರ್(disclaimer) ಹಾಕಲಾಗಿದೆ ಎಂಬ ಪ್ರತಿವಾದಿಗಳ ವಾದಕ್ಕೆ ಸಂಬಂಧಿಸಿದಂತೆ ಪೀಠವು, “ಡಿಸ್ಕ್ಲೇಮರ್(disclaimer) ಹಾಕಿದವರು ದೇಶವಾಸಿಗಳು ಮತ್ತು ಯುವಕರನ್ನು ಬುದ್ಧಿಹೀನರು ಎಂದು ಪರಿಗಣಿಸುತ್ತಾರೆಯೇ? ನೀವು ಭಗವಾನ್ ರಾಮ, ಲಕ್ಷ್ಮಣ, ಹನುಮಂತ ದೇವರು ಹಾಗೂ ರಾವಣ, ಲಂಕೆಯನ್ನು ತೋರಿಸುತ್ತೀರಿ ಮತ್ತು ನಂತರ ಅದು ರಾಮಾಯಣವಲ್ಲ ಎಂದು ಹೇಳಿದರೆ… ಎಂದು ಕೋರ್ಟ್ ಪ್ರಶ್ನಿಸಿತು.
“ಜನರು ಥಿಯೇಟರ್‌ಗಳಿಗೆ ಹೋಗಿ ಚಲನಚಿತ್ರದ ಪ್ರದರ್ಶನ ಬಂದ್ ಮಾಡಿಸಿದ್ದಾರೆ ಎಂದು ನಾವು ಸುದ್ದಿಯಲ್ಲಿ ನೋಡಿದ್ದೇವೆ. ಯಾರೂ ಅದನ್ನು ಧ್ವಂಸಗೊಳಿಸಲಿಲ್ಲ ಎಂದು ಕೃತಜ್ಞರಾಗಿರಿ” ಎಂದು ನ್ಯಾಯಾಲಯವು ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ