ಬೆಂಗಳೂರು : ಹಿಂದಿನ ಸರ್ಕಾರದ ಅವಧಿ ಕಾಮಗಾರಿಗಳ ಹಣ ಬಿಡುಗಡೆಗೆ ತಡೆ ನೀಡಿದ್ದ ಸರ್ಕಾರ ಈಗ ಅದನ್ನು ತೆರವು ಮಾಡಿದೆ. ಹಾಗೂ ಎಲ್ಲ ಇಲಾಖೆಗಳು, ನಿಗಮಗಳ ಕಾಮಗಾರಿ ಬಿಲ್ ಬಿಡುಗಡೆ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಎಲ್ಲ ಇಲಾಖೆಗಳು, ತಮ್ಮ ಅಧೀನದ ಕಾಮಗಾರಿ ಬಿಲ್ ಪಾವತಿಸುವ ಕಾಮಗಾರಿಯ ನೈಜತೆ, ನಿಯಮಾನುಸಾರ ಇದೆಯಾ ಎಂದು ಖಾತ್ರಿ ಪಡಿಸಿಕೊಂಡು ಸಂಬಂಧಿಸಿದ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ. ಏಕ್ರೂಪ್ ಕೌರ್ ಸುತ್ತೋಲೆ ಹೊರಡಿಸಿದ್ದಾರೆ.
ಎಲ್ಲ ಇಲಾಖೆಗಳು ಮತ್ತು ಇಲಾಖೆಗಳ ಅಧೀನಕ್ಕೊಳಪಡುವ ನಿಗಮ, ಮಂಡಳಿ, ಪ್ರಾಧಿಕಾರಗಳ ಮುಂದುವರೆದ ಕಾಮಗಾರಿಗಳಿಗೆ ಸಂಬಂಧಿಸಿದಂತ ಬಿಲ್ಲುಗಳ ನೈಜತೆ ಹಾಗೂ ಕಾಮಗಾರಿ ನಿಯಮಾನುಸಾರ ಇರುವುದನ್ನು ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವುದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಮುಂದುವರಿದ ಕಾರ್ಯಕ್ರಮ, ಯೋಜನೆಗಳಿಗೆ ಸಂಬಂಧಿಸಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಗಳ ಸಂಬಂಧ ಹಣ ಬಿಡುಗಡೆ ಮಾಡಬಹುದಾಗಿದೆ. ಪ್ರಾರಂಭವಾಗದಿರುವ ಕಾಮಗಾರಿಗಳ ಬಗ್ಗೆ 2023 ಮೇ 22ರ ನಿರ್ದೇಶನಗಳು ಮುಂದುವರಿಯುತ್ತವೆ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ