ಬೆಂಗಳೂರು: ಮುಂದಿನ 10 ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರೀ ಮಳೆಯಾಗುವ (Heavy Rain) ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ (ಅಂದಾಜು 64.5 ಮಿಮೀ ನಿಂದ 115 ಮಿಮೀ). ಕರಾವಳಿಯ ವಿವಿಧ ಸ್ಥಳಗಳಲ್ಲಿ ಈ ಅವಧಿಯಲ್ಲಿ ಅತಿ ಹೆಚ್ಚು (244.4 ಮಿಮೀ ವರೆಗೆ) ಮಳೆಯಾಗಬಹುದು ಎಂದು ಅದು ತಿಳಿಸಿದೆ.
ಕರಾವಳಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಬಹುದು. ಕೆಲವೆಡೆ ಪ್ರವಾಹ ಪರಿಸ್ಥಿತಿಯೂ ಸಂಭವಿಸಬಹುದು ಎಂದು ಕೆಎಸ್ಎನ್ಡಿಎಂಸಿ ಪ್ರಕಟಣೆ ತಿಳಿಸಿದೆ.
ಅಗತ್ಯ ಎದುರಾದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಅಂತಹ ಪ್ರದೇಶಗಳಲ್ಲಿ ಮುಂಚಿತವಾಗಿ ಡಿ-ವಾಟರಿಂಗ್ ಪಂಪ್ಗಳು ಮತ್ತು ಇತರ ಉಪಕರಣಗಳನ್ನು ನಿಯೋಜಿಸಲು ಜಿಲ್ಲಾಡಳಿತಗಳಿಗೆ ತಿಳಿಸಲಾಗಿದೆ. ಯಾವುದೇ ಅನಾಹುತ ತಡೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ಡಿಆರ್ಎಫ್ ಸಿಬ್ಬಂದಿಯನ್ನು ದುರ್ಬಲ ಪ್ರದೇಶಗಳಲ್ಲಿ ನಿಯೋಜಿಸಲು ಸಂಬಂಧಿಸಿದ ಆಡಳಿತಕ್ಕೆ ಸೂಚಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಜುಲೈ 2 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 45 ಕಿಮೀ ಯಿಂದ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿ 3 ರಿಂದ 3.2 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಲೆಗಳನ್ನು ಏಳುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರ್ನಾಟಕದಲ್ಲಿ ಅತಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ದಕ್ಷಿಣ ಕರ್ನಾಟಕದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮಳೆಯ ಕೊರತೆ…
ಜೂನ್ 10 ರಂದು ರಾಜ್ಯಕ್ಕೆ ಮುಂಗಾರು ಆಗಮಿಸಿದ್ದರೂ, ತಿಂಗಳ ಮೊದಲ 25 ದಿನಗಳಲ್ಲಿ ರಾಜ್ಯವು ಕೇವಲ 113.5 ಮಿಮೀ ಮಳೆಯನ್ನು ದಾಖಲಿಸಿದೆ, ಇದು ವಾಡಿಕೆ ಸರಾಸರಿ 152.4 ಮಿ.ಮೀ.ಮಳೆಗಿಂತ ಕಡಿಮೆಯಿದೆ.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಪ್ರಕಾರ ಇದು 25.52%ರಷ್ಟು ಮಳೆಯ ಕೊರತೆಯಾಗಿದೆ.
ಮಲೆನಾಡು ಪ್ರದೇಶದಲ್ಲಿ ವಾಡಿಕೆ ಮಳೆ 265.8 ಮಿಮೀ ಆಗಬೇಕಿತ್ತು, ಆದರೆ 107.2 ಮಿಮೀ ಮಳೆ ದಾಖಲಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಶೇ.60 ರಷ್ಟು ಮಳೆ ಕೊರತೆಯಾಗಿದೆ.
ಕರಾವಳಿ ಪ್ರದೇಶವು ಜೂನ್ನಲ್ಲಿ 53 ಪ್ರತಿಶತದಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. 618.5 ಮಿಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ ಬದಲಾಗಿ 289 ಮಿಮೀ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಶೇ.6ರಷ್ಟು ಮಳೆ ಕೊರತೆಯಾಗಿದೆ. ಇದು ಸಾಂಪ್ರದಾಯಿಕ ಮಳೆ 81.5 ಮಿಮೀ ಆಗಬೇಕಿತ್ತು. 76.3 ಮಿಮೀ ಮಳೆ ಆಗಿದೆ.
ದಕ್ಷಿಣ ಕರ್ನಾಟಕದಲ್ಲಿ ಶೇ.103ರಷ್ಟು ಅಧಿಕ ಮಳೆ ದಾಖಲಾಗಿದೆ. ಇದು ಜೂನ್ನಲ್ಲಿ ಸಾಮಾನ್ಯ ಮಳೆಯಾದ 57.3 ಮಿಮೀ ವಿರುದ್ಧ 116.2 ಮಿಮೀ ಮಳೆಯನ್ನು ದಾಖಲಿಸಿದೆ.
ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಜೂನ್ನಲ್ಲಿ ಕ್ರಮವಾಗಿ ಶೇ.52 ಮತ್ತು ಶೇ.54ರಷ್ಟು ಮಳೆ ಕೊರತೆ ದಾಖಲಾಗಿದೆ. ಇದೇ ಅವಧಿಯಲ್ಲಿ ಶಿವಮೊಗ್ಗ ಮತ್ತು ಕೊಡಗಿನಲ್ಲಿ ಕ್ರಮವಾಗಿ ಶೇ.74 ಮತ್ತು ಶೇ.70ರಷ್ಟು ಮಳೆ ಕೊರತೆಯಾಗಿದೆ.
ಧಾರವಾಡ, ಕಲಬುರಗಿ, ಬೆಳಗಾವಿ, ಹಾವೇರಿ, ಬೀದರ್ಗಳಲ್ಲೂ ಮಳೆ ಕೊರತೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ