ಪ್ರಾಧ್ಯಾಪಕರ ಕಾರ್ಯಕ್ಕೆ ಹೊಸ ಭಾಷ್ಯ ಬರೆದ ಡಾ.ವೀರೇಶಸ್ವಾಮಿ ಕಟ್ಟೀಮಠ

ಸೇವೆಗೆ ಹೊಸ ಭಾಷ್ಯ ಬರೆದ ಪ್ರಾಧ್ಯಾಪಕರಾದ ಡಾ.ವೀರೇಶಸ್ವಾಮಿ ಶಶಿಧರಸ್ವಾಮಿ ಕಟ್ಟೀಮಠ ಜೂನ್‌ ೩೦ರಂದು ಸೇವಾ ನಿವೃತ್ತಿಯಾಗಿದ್ದಾರೆ. ಕೆಎಲ್‌ಇ ಸಂಸ್ಥೆಯ ಶ್ರೀ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಿಂದ ಸೇವಾ ನಿವೃತ್ತಿಯಾದರು. ವಿದ್ಯಾಕಾಶಿ ಧಾರವಾಡದಲ್ಲಿ ಜನಿಸಿದ ಅವರು ೧೯೯೧ ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಹುಬ್ಬಳ್ಳಿಯ ಆರ್. ಎನ್. ಶೆಟ್ಟಿ ಗ್ರೂಪ್ ಆಪ್ ಕಂಪನಿಯಲ್ಲಿ ಸೇವೆ ಆರಂಭಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ನಂತರ ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್. ಮಹಿಳಾ ಮಹಾವಿದ್ಯಾಲಯ, ಎಸ್. ಜೆ. ಎಂ.ವಿ. ಎಸ್. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೦೦೫ರ ವರೆಗೆ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ೨೦೦೫ರಲ್ಲಿ ಗದಗಿನ ಜಗದ್ಗುರು ತೊಂಟದಾರ್ಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯ ಮಾಡಿದ್ದಾರೆ.
೨೦೦೮ರಿಂದ ಹುಬ್ಬಳ್ಳಿಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರ್ಪಡೆಯಾದ ಅವರು ೧೬ ವರ್ಷಗಳ ಸೇವೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾದರು.
ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದ ಅವರು ೧೯೮೯ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ. ೧೯೯೧ ರಲ್ಲಿ ಎಂ.ಕಾಂ. ೨೦೦೩ ರಲ್ಲಿ ಫೆನಾನ್ಶಿಯಲ್ ಪಾಲಿಸಿಸ್ ಆಫ್ ಕಾರ್ಪೊರೇಟ್ ಇಂಡಿಯಾ ವಿಷಯದ ಮೇಲೆ ಪಿಎಚ್ ಡಿ ಪಡೆದಿದ್ದಾರೆ. ೨೦೦೯ರಲ್ಲಿ ಸೇಲಂ ವಿನಾಯಕ ವಿಶ್ವವಿದ್ಯಾಲಯದಿಂದ ಹುಬ್ಬಳ್ಳಿ ಪ್ರತಿಷ್ಠಿತ ವಿ. ಆರ್. ಎಲ್ ಲಾಜಿಸ್ಟಿಕ್ ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯ ಕುರಿತು ಎಂ.ಫಿಲ್ ಪದವಿ ಪಡೆದಿದ್ದಾರೆ. ೪೫ಕ್ಕೂ ಹೆಚ್ಚಿನ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ, ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡಿದ್ದಾರೆ. ವ್ಯಾಪಕವಾದ ಅಧ್ಯಯನ ಮತ್ತು ಸಂಪರ್ಕಗಳಿಂದ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಎಫ್‌.ಡಿ.ಐ. ಎಜ್ ಡೈವಿಂಗ್ ಫೋರ್ಸ್‌ ಫಾರ್ ಆಫ್ ಮೇಕ್ ಇನ್ ಇಂಡಿಯಾ, “ಎ ಸ್ಟಡಿ ಆನ್ ರೀನಿವಲ್ ಎನರ್ಜಿ ಎಲ್ ಗೇಟ್ಸ್”, “ ಎ ಸ್ಟಡಿ ಆನ್ ರೈಸ್‌ ಆಫ್ ಇನ್‌ಫಾರ್ಮೇಶನ್ ಆ್ಯಂಡ್ ಟೆಕ್ನಾಲಜಿ ಇನ್ ಹೈಯರ್ ಎಜ್ಯುಕೇಶನ್” ಪ್ರಮುಖವಾದವುಗಳು.
ಕಟ್ಟೀಮಠ ಅವರು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿ ೨೦೧೦ ರಲ್ಲಿ ಸೇವೆ ಆರಂಭಿಸಿದರು. ಇದು ಅವರ ಜೀವನದಲ್ಲಿ ಹೊಸ ತಿರುವಿಗೆ ನಾಂದಿಯಾಯಿತು. ವಿದ್ಯಾರ್ಥಿಗಳಲ್ಲಿ ಶರಣರ ಕಾಯಕ ಮತ್ತು ದಾಸೋಹ ಪರಿಕಲ್ಪನೆ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯಡಿ ವಿದ್ಯಾರ್ಥಿಗಳಲ್ಲಿ ರಕ್ತದಾನ, ಶ್ರಮದಾನ, ಮತದಾನ, ಸ್ವಚ್ಛತೆ, ರಾಷ್ಟ್ರೀಯ ನಾಯಕರ ಸಂದೇಶದ ಬಗ್ಗೆ ಅಧ್ಯಯನ ಮತ್ತು ಪರಿಸರ ಪ್ರೀತಿಯನ್ನು ಬೆಳೆಸುವ ಕೆಲಸ ಮಾಡಿದರು. ಕೋವಿಡ್‌-೧೯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲಕ ಮುಷ್ಟಿ ಅಕ್ಕಿ ಅಭಿಯಾನದ ಮೂಲಕ ೬೦೦ ಕ್ವಿಂಟಲ್ ಅಕ್ಕಿ ಸಂಗ್ರಹಿಸಿ, ಅದನ್ನು ಬಡವರಿಗೆ, ಅನಾಥರಿಗೆ, ಸಿದ್ಧಾರೂಢ ಮಠ, ಮುರುಘಾಮಠ, ಸಾಯಿ ಮಂದಿರ, ಕುಂದಗೋಳದ ಕಲ್ಯಾಣಪುರಮಠ ಮುಂತಾದ ಕಡೆಗೆ ವಿತರಿಸಿ, ಸಾರ್ವಜನಿಕರ ಪ್ರೀತಿ, ವಿಶ್ವಾಸಗಳಿಸಿದರು.

ನೆರೆ ಹಾವಳಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲಕ ೧ ಲಕ್ಷ ರೂ.ಹಣವನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದಾರೆ. ಅಂಚಟಗೇರಿ ಗ್ರಾಮದ ೬೫ ಹೆಕ್ಟೇರ್ ಪ್ರದೇಶದಲ್ಲಿ ೮೦೦ಕ್ಕೂ ಹೆಚ್ಚಿನ ಉಪಯುಕ್ತ ಸಸಿಗಳನ್ನು ನೆಡುವ ಕೆಲಸ ಮಾಡಿದ್ದಾರೆ.
ಮಹಾವಿದ್ಯಾಲಯದ ದತ್ತು ಗ್ರಾಮಗಳಾದ ಹಳ್ಯಾಳ, ತಿರುಮಲಕೊಪ್ಪ, ಪಾಲಿಕೊಪ್ಪ, ಇಡಗಟ್ಟಿ, ಕಮಡೊಳ್ಳಿ, ನೂಲ್ವಿ ಪ್ರದೇಶದಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ನಗರ ಗಣ್ಯರ ಪ್ರತಿಮೆಗಳನ್ನು ಎನ್.ಎಸ್.ಎಸ್. ಸ್ವಯಂ ಸೇವಕರ ಮೂಲಕ ಸ್ವಚ್ಛ, ಗಣೇಶೋತ್ಸವ ಸಂದರ್ಭದಲ್ಲಿ ಟ್ರಾಕ್ಟರ್‌ಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಿ, ಆ ಮೂಲಕ ವಿವಿಧ ಬಡಾವಣೆಗಳ ಗಣೇಶ ಮೂರ್ತಿಳ ವಿಸರ್ಜನೆಗೆ ಸಹಕರಿಸಿದ್ದಾರೆ. ಇದು ರಾಷ್ಟ್ರೀಯ ಸಮಾಚಾರವಾಗಿ ಸಹ ಬಿತ್ತರಗೊಂಡಿದೆ.
ಆಲ್ ಇಂಡಿಯಾ ಕಾಮರ್ಸ್ ಟೀರ‍್ಸ್ ಅಸೋಸಿಯೇಶನ್, ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಟೀಚರ್ಸ್‌ ಅಸೋಸಿಯೇಶನ್‌, ಕರ್ನಾಟಕ ವಿಶ್ವವಿದ್ಯಾಲಯ ಕಾಮರ್ಸ್ ಟೀಚರ್ಸ್‌ ಅಸೋಸಿಯೇಶನ್, ಉನ್ನತ ಶಿಕ್ಷಣ ಅಕಾಡೆಮಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಮಹಾಸಭಾ ಬಸವ ಸಮಿತಿ ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ, ಪದಾಧಿಕಾರಿಯಾಗಿ ರಚನಾತ್ಮಕ ಕಾರ‍್ಯಗಳನ್ನು ಮಾಡಿದ್ದಾರೆ.

ವಿದ್ಯಾರ್ಥಿಗಳ ಒಳಿತಿಗಾಗಿ ಹಲವಾರು ಯೋಜನೆಗಳನ್ನು, ಸಮ್ಮೇಳನಗಳನ್ನು, ಕಾರ್ಯಾಗಾರಗಳನ್ನು ನಿರಂತರವಾಗಿ ಆಯೋಜಿಸಿ ಅವರಿಗೆ ಚೈತನ್ಯ ನೀಡುವ ಕೆಲಸ ಮಾಡಿದ್ದಾರೆ. ದಾನದ ಪರಂಪರೆಯನ್ನು ಮತ್ತು ಸಾಮಾಜಿಕ ಕಳಕಳಿಯನ್ನು ಅಳವಡಿಸಿಕೊಂಡಿರುವ ಅವರು ೨೦೧೯-೨೦ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಡಿ.ಸಿ. ಪಾವಟೆ, ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ನಗರದ ಹಲವಾರು ಶಾಲಾ, ಕಾಲೇಜು ಮತ್ತು ಇತರ ಸಂಘ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೂರುಸಾವಿರಮಠದ ಉಭಯ ಜಗದ್ಗುರುಗಳು, ನಾಡಿನ ಹಲವು ಮಠಾಧೀಶರು, ತಮ್ಮ ತಂದೆ ಡಾ. ಶಶಿಧರಸ್ವಾಮಿ, ತಾಯಿ ಪ್ರಭಾವತಿ, ಸಹೋದರರಾದ ಶಾಂತವೀರ, ಶರತ್‌ ಚಂದ್ರ, ಸಹೋದರಿ, ನಿವೃತ್ತ ಪ್ರಾಚಾರ್ಯರಾದ ವಿಜಯಲಕ್ಷ್ಮೀ, ಪ್ರಾಚಾರ್ಯರಾದ ಪ್ರೊ. ಆರ್. ನಟರಾಜ, ಡಾ. ಆನಂದ ಮುಳಗುಂದ, ಪ್ರೊ. ಡಿ.ವಿ. ಹೊನ್ನಣ್ಣವರ, ಪ್ರೊ. ಎಸ್. ಎಲ್. ಪಾಟೀಲ, ಅವರ ಮಾರ್ಗದರ್ಶ, ಪತ್ನಿ ವೀಣಾ, ಮಗ ವಿಶ್ವ, ಸಹೋದ್ಯೋಗಿಗಳು, ಸ್ನೇಹಿತರಾಗಿದ್ದ ನಿಜಗುಣಿ ಹತ್ಯಾಳ ಮತ್ತು ಇತರ ಸ್ನೇಹಿತರ ಸಹಕಾರವನ್ನು ಸ್ಮರಿಸುತ್ತಾರೆ.
-ಡಾ. ಬಿ. ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

 

 

3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement