ಗೃಹಜ್ಯೋತಿ ಯೋಜನೆ ಜಾರಿಗೆ ವಾರ್ಷಿಕ 13,910 ಕೋಟಿ- ಅನ್ನಭಾಗ್ಯ ಯೋಜನೆಗೆ 10,000 ಕೋಟಿ ರೂ.ವೆಚ್ಚ

ಬೆಂಗಳೂರು: ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಜಾರಿಗೆ ಐದು ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ಗೃಹ ಲಕ್ಷ್ಮಿ ಯೋಜನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ ನಿಗದಿಪಡಿಸಲಾಗಿದೆ. ಉಚಿತ ವಿದ್ಯುತ್ ‘ಗೃಹಜ್ಯೋತಿ’ ಯೋಜನೆಗಾಗಿ ಇಂಧನ ಇಲಾಖೆಗೆ 22,773 ಕೋಟಿ ರೂಪಾಯಿ ಅನುದಾನ ನಿಗದಿ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಗಾಗಿ ಆಹಾರ ಇಲಾಖೆಗೆ 10,460 ಕೋಟಿ ನಿಗದಿಪಡಿಸಲಾಗಿದೆ. ಉಚಿತ ಬಸ್ ಪ್ರಯಾಣ‌ದ ‘ಶಕ್ತಿ ಯೋಜನೆ’ಗಾಗಿ ಸಾರಿಗೆ ಇಲಾಖೆಗೆ 16,638 ಕೋಟಿ ರೂ‌ ನಿಗದಿ ಪಡಿಸಲಾಗಿದ್ದು, ಯುವಭತ್ಯೆ ಯೋಜನೆಗೆ ಕೌಶಲ್ಯಾಭಿವೃದ್ಧಿ ಇಲಾಖೆಗೆ (ಇತರೆ ವರ್ಗದಲ್ಲಿ) ಅನುದಾನ ಸೇರಿಸಲಾಗಿದೆ
ವಿದ್ಯುತ್ ಗ್ರಾಹಕರಿಗೆ ಮಾಸಿಕ 200 ಯುನಿಟ್ ಉಚಿತವಾಗಿ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ವಾರ್ಷಿಕ 13,910 ಕೋಟಿ ರೂ ವೆಚ್ಚವಾಗಲಿದೆ ಎಂದು ಶುಕ್ರವಾರ 2023-24ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
‘ಗೃಹಜ್ಯೋತಿ’ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜುಲೈ 1 ರಿಂದ ಬಳಕೆಯಾಗುವ ವಿದ್ಯುತ್ತಿನ ಬಿಲ್‌ಗೆ ಇದು ಅನ್ವಯವಾಗಲಿದೆ. ವಿದ್ಯುಚ್ಛಕ್ತಿಯ ಎರಡು ಕೋಟಿಗಿಂತ ಹೆಚ್ಚು ಗೃಹ ಬಳಕೆದಾರರಿಗೆ ಉಪಯೋಗವಾಗಲಿರುವ ಈ ಯೋಜನೆಗೆ ವಾರ್ಷಿಕವಾಗಿ ಅಂದಾಜು 13,910 ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದು ತಿಳಿಸಿದರು.
ವಿದ್ಯುತ್ ಕಂಪೆನಿಗಳಿಂದ ಬಾಕಿ
ವಿವಿಧ ವಿದ್ಯುತ್ ಉತ್ಪಾದನಾ (GENCOs) ಮತ್ತು ವಿತರಣಾ ಸಂಸ್ಥೆಗಳಿಗೆ ವಿದ್ಯುತ್‌ ಸರಬರಾಜು ಕಂಪನಿಗಳಿಂದ ಪಾವತಿಸಬೇಕಾದ ಬಾಕಿ ಮೊತ್ತ 2023ರ ಮಾರ್ಚ್ ಅಂತ್ಯಕ್ಕೆ 16,132 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಇದು ಮಾರ್ಚ್ 2018ರ ಅಂತ್ಯಕ್ಕೆ 11,956 ಕೋಟಿ ರೂ. ಗಳಷ್ಟಿತ್ತು, ವಿದ್ಯುತ್ ಸರಬರಾಜು ಕಂಪನಿಗಳು ಹಣ ಪಾವತಿ ಮಾಡದೇ ಇರುವುದರಿಂದ ಕರ್ನಾಟಕ ವಿದ್ಯುತ್ ನಿಗಮದ ಆರ್ಥಿಕ ಸ್ಥಿತಿ ಕುಸಿದಿದೆ. ಕೆಪಿಸಿಎಲ್‌ನ ಸಾಲದ ಪ್ರಮಾಣವು 2018ರ ಮಾರ್ಚ್ ಅಂತ್ಯಕ್ಕೆ 19,477 ಕೋಟಿ ರೂ.ಗಳಿದ್ದು, 2023ರ ಮಾರ್ಚ್ ಅಂತ್ಯಕ್ಕೆ 31,145 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.
ವಿದ್ಯುತ್‌ ಉತ್ಪಾದಕ, ಪ್ರಸರಣ ಮತ್ತು ಸರಬರಾಜು ಕಂಪನಿಗಳ ಒಟ್ಟಾರೆ ಸಾಲದ ಬಾಕಿ ಮೊತ್ತವು 31.03.2018ರ ಮುಕ್ತಾಯಕ್ಕೆ 51,087 ಕೋಟಿ ರೂ.ಗಳಿತ್ತು. ಹಿಂದಿನ ಸರ್ಕಾರವು ದಿನಾಂಕ: 31.03.2023 ರ ಮುಕ್ತಾಯಕ್ಕೆ ಇದು ಒಟ್ಟು 91,911 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಲ್ಲದೆ, ವಿದ್ಯುತ್‌ ಸರಬರಾಜು ಕಂಪನಿಗಳ ಸಂಚಿತ ನಷ್ಟ (Cumulative loss) 31.03.2018ರ ಅಂತ್ಯಕ್ಕೆ 4,725 ಕೋಟಿ ರೂ.ಗಳಿದ್ದಿದ್ದು 31.03.2023ರ ಮುಕ್ತಾಯಕ್ಕೆ 17,056 ಕೋಟಿ ರೂ.ಗಳಿಗೆ ತಲುಪಿದೆ ಎಂದು ತಿಳಿಸಿದ ಅವರು, ಹಿಂದಿನ ಸರ್ಕಾರದ ದುರಾಡಳಿತಕ್ಕೆ ಇದು ನಿದರ್ಶನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರವು ವಿದ್ಯುತ್‌ ಸರಬರಾಜು ಕಂಪನಿಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಮತ್ತು ಗುಣಮಟ್ಟದ ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ 2035ರವರೆಗಿನ ಮುನ್ನೋಟ ಸಿದ್ಧಪಡಿಸಲಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಗೆ 10,000 ಕೋಟಿ ರೂ.
ಅನ್ನಭಾಗ್ಯ ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕೆ ವರ್ಷಕ್ಕೆ ಸುಮಾರು 10,000 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯನ್ನು (Anna Bhagya Yojana) ಯೋಜನೆ ಜಾರಿಗೊಳಿಸಲು ಪರ್ಯಾಯ ಮಾರ್ಗ ಕಂಡುಕೊಂಡಿದ್ದೇವೆ. ಪ್ರತಿ ತಿಂಗಳು ಬಡವರಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಆಹಾರ ಧಾನ್ಯಗಳನ್ನು ರಾಜ್ಯ ಸರ್ಕಾರ ಖರೀದಿಸಿ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನಾ ವೆಚ್ಚಗಳಿಗೆ ಸಂಪನ್ಮೂಲ ಕ್ರೋಢೀಕರಣ ಹೇಗೆ..?
ಗ್ಯಾರಂಟಿಯೋಜನೆಗಳಿಗೆ ಹಾಗೂ ಇತರ ಯೋಜನಾ ವೆಚ್ಚಗಳಿಗೆ ಸಂಪನ್ಮೂಲ ಕ್ರೋಢೀಕರಣದ ಲೆಕ್ಕಾಚಾರವನ್ನೂ ಮಾಡಲಾಗಿದ್ದು, ರಾಜ್ಯ ತೆರಿಗೆ ಆದಾಯದಿಂದ – 54%, ಸಾಲದಿಂದ‌ – 26%, ಕೇಂದ್ರದ ತೆರಿಗೆ ಪಾಲಿನಿಂದ – 12%, ಕೇಂದ್ರ ಸರ್ಕಾರದ ಸಹಾಯ ಧನದಿಂದ – 4% ಮತ್ತು ರಾಜ್ಯ ತೆರಿಗೆಯೇತರ ರಾಜಸ್ವದಿಂದ – 4% ಸಂಪನ್ಮೂಲ ಕ್ರೋಢೀಕರಣವನ್ನು ನಿರೀಕ್ಷೆ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಪ್ರದೇಶಗಳೂ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement