ನವದೆಹಲಿ: ‘ಮೇಕ್ ಇನ್ ಇಂಡಿಯಾ’ದ ಭಾಗವಾಗಿ ಭಾರತದಲ್ಲಿಯೇ ನಿರ್ಮಾಣವಾಗುತ್ತಿರುವ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಹೈ ಸ್ಪೀಡ್ ರೈಲು ಇನ್ನು ಮುಂದೆ ಕೇಸರಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2019ರ ಫೆ.15ರಂದು ಮೊದಲಿಗೆ ದೆಹಲಿ-ವಾರಾಣಸಿ ನಡುವಿನ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದಾಗಿನಿಂದ ಈವರೆಗೂ ರೈಲುಗಳು ಬಿಳಿ ಹಾಗೂ ನೀಲಿ ಬಣ್ಣವನ್ನು ಹೊಂದಿದ್ದವು. ಈಗ 28ನೇ ಆವೃತ್ತಿಯ ಹೊಸ ವಂದೇ ಭಾರತ ರೈಲು ಬಿಳಿ ಮತ್ತು ಕೇಸರಿ ಬಣ್ಣವನ್ನು ಹೊಂದಿರಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ 25 ರೈಲುಗಳು ತಮ್ಮ ನಿಯೋಜಿತ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಎರಡು ರೈಲುಗಳನ್ನು ಮೀಸಲು ಇರಿಸಲಾಗಿದೆ. 28ನೇ ರೈಲಿನ ಬಣ್ಣವನ್ನು ಪ್ರಾಯೋಗಿಕ ಆಧಾರದಲ್ಲಿ ಬದಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಬಣ್ಣದ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇನ್ನೂ ಕಾರ್ಯಾಚರಣೆಗೆ ಇಳಿದಿಲ್ಲ. ಅದು ವಂದೇ ಭಾರತ್ ರೈಲುಗಳು ತಯಾರಾಗುವ ತಮಿಳುನಾಡಿನ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ಸಿದ್ಧವಾಗಿದೆ ಎಂದು ವರದಿಯಾಗಿದೆ. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಫೋಟೊಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಟ್ವಟಿರಿನಲ್ಲಿ ಹಂಚಿಕೊಂಡಿದ್ದಾರೆ.
ಬಣ್ಣ ಬದಲಾವಣೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ನಮ್ಮ ದೇಶದ ತಂತ್ರಜ್ಞಾನವನ್ನು ಬಳಸಿ ವಂದೇ ಭಾರತ್ ರೈಲನ್ನು ತಯಾರಿಸಲಾಗುತ್ತಿದೆ. ಹೀಗಾಗಿ, ಹೊಸ ಬಣ್ಣವು ಭಾರತದ ತ್ರಿವರ್ಣ ಧ್ವಜದಿಂದ ಸ್ಫೂರ್ತಿ ಪಡೆದಿದೆ ಎಂದು ತಿಳಿಸಿದ್ದಾರೆ.ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಪರಿಶೀಲನೆ ನಡೆಸಿದರು. ದಕ್ಷಿಣ ರೈಲ್ವೇಸ್‌ನ ಸುರಕ್ಷತಾ ಕ್ರಮಗಳನ್ನು ಪರಾಮರ್ಶಿಸಿದರು. ಜತೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿನ ಸುಧಾರಣೆಗಳ ಪರಾಮರ್ಶೆ ಸಹ ನಡೆಸಿದರು.
ನಿಮ್ಮ ಕಾಮೆಂಟ್ ಬರೆಯಿರಿ