ವಿಧಾನಸೌಧದಲ್ಲಿ ಭದ್ರತೆ ಪರಿಶೀಲನೆ ವೇಳೆ ಮಹಿಳೆಯ ಬ್ಯಾಗ್​​ನಲ್ಲಿ ಚಾಕು ಪತ್ತೆ..

ಬೆಂಗಳೂರು: ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದಿದ್ದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಇನ್ನೂ ಹೆಚ್ಚಿಸಲಾಗಿದೆ. ವಿಧಾನಸೌಧಕ್ಕೆ ಬರುವವರನ್ನು ತೀವ್ರ ತಪಾಸಣೆಗೊಳಪಡಿಸಿ ಒಳಗೆ ಬಿಡಲಾಗುತ್ತಿದೆ. ಹೀಗೆ ಪರೀಕ್ಷೆ ನಡೆಸುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ನಲ್ಲಿ ಚಾಕುವೊಂದು ಪತ್ತೆಯಾಗಿದ್ದು, ನಂತರ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ವಿಧಾನಸೌಧದ ಪೂರ್ವ ಬಾಗಿಲಿನ ಮೂಲಕ ಈ ಮಹಿಳೆ ಒಳಪ್ರವೇಶಿಸಿದ್ದರು. ದ್ವಾರದಲ್ಲೇ ಇರುವ ಬ್ಯಾಗೇಜ್ ಸ್ಕ್ಯಾನಿಂಗ್ ಯಂತ್ರದಲ್ಲಿ ಬ್ಯಾಗ್ ಅನ್ನು ಸ್ಕ್ಯಾನಿಂಗ್ ಗೆ ಒಳಗಾದಾಗ ಬ್ಯಾಗಿನಲ್ಲಿ ಚಾಕು ಇರುವುದನ್ನು ಸ್ಕ್ಯಾನಿಂಗ್ ಸ್ಕ್ರೀನ್ ನಲ್ಲಿ ಭದ್ರತಾ ಸಿಬ್ಬಂದಿಗೆ ಕಂಡುಬಂದಿದೆ. ಕೂಡಲೇ ಆ ಚಾಕುವನ್ನು ವಶಕ್ಕೆ ತೆದುಕೊಳ್ಳಲಾಗಿದೆ.
ಮಹಿಳೆಯನ್ನು ವಿಚಾರಣೆ ನಡೆಸಲಾಗಿದೆ. ಮಹಿಳೆಯರ ವಿವರಗಳು ಬಹಿರಂಗವಾಗಿಲ್ಲ. ಆದರೆ, ಕೆಲವು ಮೂಲಗಳು ಆಕೆಯು ವಿಧಾನಸೌಧದ ಹೊರಗುತ್ತಿಗೆಯ ಮಹಿಳಾ ಸಿಬ್ಬಂದಿ ಎಂದು ಹೇಳಿವೆ.

ಜುಲೈ 3ರಿಂದು ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ. ಜುಲೈ 8ರಂದು ಬಜೆಟ್‌ ಮಂಡಳನೆ ವೇಳೆ ಅನಾಮಿಕ ವ್ಯಕ್ತಿಯೊಬ್ಬರು ವಿಧಾನಸಭೆಯನ್ನು ಪ್ರವೇಶಿಸಿದ್ದರು. ದ್ವಾರದಲ್ಲಿ ಅವರನ್ನು ಭದ್ರತಾ ಸಿಬ್ಬಂದಿಯು ತಡೆದಿದ್ದರೂ ಆ ವ್ಯಕ್ತಿಯು ತಾವು ಮೊಳಕಾಲ್ಮುರು ಶಾಸಕ ಎಂದು ಪರಿಚಯಿಸಿಕೊಂಡು ಒಳಗೆ ಪ್ರವೇಶಿಸಿದ್ದರು. ಒಳಕ್ಕೆ ಹೋಗಿದ್ದ ಅವರು ಶಾಸಕರೊಬ್ಬರ ಆಸನದಲ್ಲಿ ಕೆಲ ಹೊತ್ತು ಕುಳಿತಿದ್ದು, ವಿಧಾನಸಭೆಯ ಕಲಾಪ ನೋಡಿಕೊಂಡು ಹೋಗಿದ್ದರು. ಆನಂತರ ಈ ಬಗ್ಗೆ ಪರಿಶೀಲಿಸಿದ ನಂತರ ಅವರು ಚಿತ್ರದುರ್ಗದ ತಿಪ್ಪೇರುದ್ರ ಎಂಬ ವ್ಯಕ್ತಿಯಾಗಿದ್ದು, ಅವರು ವಕೀಲರಾಗಿದ್ದರು. ಅವರು ಕುತೂಹಲದಿಂದ ವಿಧಾನಸೌಧ ಪ್ರವೇಶಿಸಿದ್ದರು ಎಂಬುದಾಗಿ ತಿಳಿದುಬಂದಿತ್ತು.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

ಇದರಿಂದ ಎಚ್ಚೆತ್ತ ಗೃಹ ಇಲಾಖೆ ವಿಧಾನಸೌಧದ ಸುತ್ತ ಮುತ್ತ ಬಿಗಿಭದ್ರತೆಯನ್ನು ಹೆಚ್ಚಿಸಿದೆ. ಹೊಸ ಶಾಸಕರು ಅನೇಕರು ಇರುವ ಕಾರಣ, ಎಲ್ಲಾ ಶಾಸಕರು ಹೆಸರು, ಫೋಟೋ ಇರುವ ಪಟ್ಟಿಯನ್ನು ತಯಾರಿಸಿ ವಿಧಾನಸೌಧದ ಎಲ್ಲಾ ಭದ್ರತಾ ತಪಾಸಣೆ ಸಿಬ್ಬಂದಿಗೆ ನೀಡಲಾಗಿದೆ.
ಮತ್ತೊಂದೆಡೆ, ವಿಧಾನಸೌಧಕ್ಕೆ ಭೇಟಿ ನೀಡುವ ಜನಸಾಮಾನ್ಯರಿಗೆ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಅವರಿಗೆ ದೈನಂದಿನ ಪಾಸ್ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಇದರ ನಡುವೆಯೇ, ಈಗ ಮಹಿಳೆಯೊಬ್ಬರ ಬ್ಯಾಗಿನಲ್ಲಿ ಚಾಕು ಪತ್ತೆಯಾಗಿರುವುದು ಭದ್ರತೆ, ತಪಾಸಣೆ ಸಿಬ್ಬಂದಿಯನ್ನು ಚಕಿತಗೊಳಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement