ನವದೆಹಲಿ: ದೇಶದಲ್ಲಿ ಟೊಮೆಟೊ ದರಗಳು ದಾಖಲೆ ಏರಿಕೆ ಕಂಡಿದ್ದು, ವಾರಗಳಿಂದ ಪ್ರತಿ ಕಿಲೋಕ್ಕೆ 100 ರೂಪಾಯಿ ದಾಟಿದೆ. ಕೇಂದ್ರ ಸರ್ಕಾರ ಇಂದು ಟೊಮೆಟೊ ಬೆಲೆ ನಿಯಂತ್ರಣಕ್ಕೆ ಕ್ರಮಗಳನ್ನು ಪ್ರಕಟಿಸಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊಗಳನ್ನು ಖರೀದಿಸಿ ಅದನ್ನು ಟೊಮೆಟೊ ದರ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ ಸೂಚಿಸಿದೆ.
ಹೊಸ ಸ್ಟಾಕ್ಗಳು ಶುಕ್ರವಾರದ ವೇಳೆಗೆ ದೆಹಲಿ-ಎನ್ಸಿಆರ್ನಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಕಳೆದ ಒಂದು ತಿಂಗಳಿನಿಂದ ಚಿಲ್ಲರೆ ಬೆಲೆಯಲ್ಲಿನ ಸಂಪೂರ್ಣ ಏರಿಕೆಯ ಆಧಾರದ ಮೇಲೆ ಈ ತಾಜಾ ಸ್ಟಾಕ್ಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಕ್ರಿಯೆಯಲ್ಲಿ ಬಳಕೆಯ ಪ್ರಮಾಣವನ್ನು ಸಹ ಪರಿಗಣಿಸಲಾಗಿದೆ. ಕೆಲ ರಾಜ್ಯಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆಜಿಗೆ 150 ರಿಂದ 200 ರೂ.ವರೆಗೆ ಮಾರಾಟವಾಗುತ್ತಿದೆ.
ಟೊಮೆಟೊವನ್ನು ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಉತ್ಪಾದಿಸಲಾಗುತ್ತದೆ, ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ದೇಶದ ಒಟ್ಟು ಉತ್ಪಾದನೆಯ ಸುಮಾರು 60 ಪ್ರತಿಶತವನ್ನು ಹೊಂದಿವೆ.
“ಉತ್ಪಾದನಾ ಋತುಗಳು ಪ್ರದೇಶಗಳಾದ್ಯಂತ ವಿಭಿನ್ನವಾಗಿವೆ. ಗರಿಷ್ಠ ಕೊಯ್ಲು ಅವಧಿಯು ಡಿಸೆಂಬರ್ನಿಂದ ಫೆಬ್ರವರಿವರೆಗೆ ಇರುತ್ತದೆ. ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಅವಧಿಗಳು ಸಾಮಾನ್ಯವಾಗಿ ಟೊಮೆಟೊ ಉತ್ಪಾದನೆಯ ತಿಂಗಳುಗಳು” ಎಂದು ಹೇಳಿಕೆ ತಿಳಿಸಿದೆ.
ಪ್ರಸ್ತುತ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಟೊಮೆಟೊ ಪೂರೈಕೆಯಾಗುತ್ತಿದೆ ಎಂದು ಸರ್ಕಾರ ಹೇಳಿದೆ. ದೆಹಲಿ ಮತ್ತು ಹತ್ತಿರದ ನಗರಗಳು ಹಿಮಾಚಲ ಪ್ರದೇಶದಿಂದ ಮತ್ತು ಕರ್ನಾಟಕದಿಂದ ದಾಸ್ತಾನುಗಳನ್ನು ಸ್ವೀಕರಿಸುತ್ತಿವೆ.
ಮಹಾರಾಷ್ಟ್ರದಿಂದ ಶೀಘ್ರದಲ್ಲೇ ಹೊಸ ಬೆಳೆ ಬರುವ ನಿರೀಕ್ಷೆಯಿದೆ ಮತ್ತು ಮಧ್ಯಪ್ರದೇಶದಲ್ಲಿಯೂ ಹೊಸ ಬೆಳೆಯ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ