ಬೆಂಗಳೂರು : ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷ (AAP)ಸಂಘಟನೆಯಲ್ಲಿ ಬಹಳಷ್ಟು ಬದಲಾವಣೆಗೆ ಮುಂದಾಗಿದೆ. ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಎಎಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚಲನಚಿತ್ರ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಎಎಪಿ ಪಕ್ಷದ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ ಪಾಠಕ್ ದೆಹಲಿಯಲ್ಲಿ ಬುಧವಾರ ರಾತ್ರಿ ಘೋಷಣೆ ಮಾಡಿದ್ದಾರೆ.
ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಬಿ.ಟಿ. ನಾಗಣ್ಣ ಹಾಗೂ ಅರ್ಜುನ್ ಪರಪ್ಪ ಹಲಗಿಗೌಡರ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಅವರು ಕಾರ್ಯನಿರ್ವಹಿಸುತ್ತಿದ್ದರು, ಇದೀಗ ಅವರನ್ನು ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.
ಕನ್ನಡ ಚಲನಚಿತ್ರದ ಖ್ಯಾತ ನಟರಾಗಿರುವ ಮುಖ್ಯಮಂತ್ರಿ ಚಂದ್ರು ಅವರು 1985 ರಿಂದ 1989ರ ವರೆಗೆ ಗೌರಿಬಿದನೂರು ಶಾಸಕರಾಗಿದ್ದರು. 1998ರಿಂದ 2010ರ ಅವಧಿಗೆ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 2008ರಿಂದ 2014ರ ವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಅನೇಕ ಧಾರವಾಹಿಗಳಲ್ಲಿಯೂ ಅಭಿನಯಿಸುವ ಮೂಲಕ ಮನೆಮಾತಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ