ಮುಂಬೈ : ಪಬ್ ಜಿ ಪ್ರೇಮಿಯೊಂದಿಗೆ ಇರಲು ಭಾರತಕ್ಕೆ ಅಕ್ರಮವಾಗಿ ಬಂದಿರುವ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ತನ್ನ ದೇಶಕ್ಕೆ ಹಿಂತಿರುಗದಿದ್ದರೆ 26/11 ಮುಂಬೈ ಭಯೋತ್ಪಾದಕ ದಾಳಿ ಮಾದರಿಯಲ್ಲೇ ದಾಳಿ ನಡೆಸುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ.
ಮುಂಬೈ ಟ್ರಾಫಿಕ್ ಪೊಲೀಸರಿಗೆ ಬಂದ ಬೆದರಿಕೆ ಕರೆಯನ್ನು ಅನುಸರಿಸಿ ಮುಂಬೈ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
PUBG ಗೇಮ್ ಮೂಲಕ ಭೇಟಿಯಾದ ಭಾರತೀಯ ಪ್ರೇಮಿಯೊಂದಿಗೆ ಇರಲು ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರನ್ನು ತಕ್ಷಣವೇ ವಾಪಸು ಕಳುಹಿಸುವಂತೆ ಅಪರಿಚಿತ ಕರೆ ಮಾಡಿದವರು ತಾಕೀತು ಮಾಡಿದ್ದಾರೆ.
“ನಿಯಂತ್ರಣ ಕೊಠಡಿಗೆ ಬಂದ ಪ್ರತಿಯೊಂದು ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಈ ಬೆದರಿಕೆಯ ಕರೆಯ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲು ನಾವು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಅನುಸರಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ವಾಟ್ಸಾಪ್ ಮೂಲಕ ಮುಂಬೈ ಟ್ರಾಫಿಕ್ ಪೋಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲಾಗಿದೆ ಮತ್ತು ಈ ಸಂಖ್ಯೆಯು ಅಮೆರಿಕ(+1 ದೇಶದ ಕೋಡ್)ದಿಂದ ಬಂದಿದೆ ಎಂದು ತೋರುತ್ತಿದೆ. ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಅಪ್ಲಿಕೇಶನ್ ಆಧಾರಿತ ಕರೆ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. “ಈ ಹಂತದಲ್ಲಿ, ಯಾವುದನ್ನೂ ತಳ್ಳಿಹಾಕುವುದಿಲ್ಲ ಮತ್ತು ಸೈಬರ್ ಸೆಲ್ ಕರೆ ಮಾಡಿದವರ IP ವಿಳಾಸವನ್ನು ಪತ್ತೆಹಚ್ಚಲು ಪ್ರಯತ್ನ ಮಾಡುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
ಕರೆ ಮಾಡಿದಾತ ಉರ್ದು ಭಾಷೆಯಲ್ಲಿ ಮಾತನಾಡುತ್ತಾ, ಸೀಮಾ ಹೈದರ್ ಪಾಕಿಸ್ತಾನಕ್ಕೆ ಹಿಂತಿರುಗದಿದ್ದರೆ ಭಾರತವು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. 26/11 ಮಾದರಿಯ ದಾಳಿಗೆ ಸಿದ್ಧರಾಗಿ, ಉತ್ತರ ಪ್ರದೇಶ ಸರ್ಕಾರವೇ ಇದಕ್ಕೆ ಹೊಣೆಯಾಗಲಿದೆ ಎಂದು ಆತ ಎಚ್ಚರಿಸಿದ್ದಾನೆ. ಟ್ರಾಫಿಕ್ ಪೊಲೀಸರಿಗೆ ವಾಟ್ಸಾಪ್ ಕರೆ ಮೂಲಕ ಬೆದರಿಕೆ ಹಾಕಲಾಗಿದೆ.
ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಸೀಮಾ ಹೈದರಳನ್ನು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ನೋಯ್ಡಾ ಪೊಲೀಸರು ಬಂಧಿಸಿದ್ದರು. ಮತ್ತು ಆಕೆಯ ಭಾರತದ ಪಬ್ ಜಿ ಪ್ರೇಮಿ ಸಚಿನ್ ಮೀನಾ ಹಾಗೂ ಆತನ ತಂದೆಯನ್ನು ಆಶ್ರಯ ನೀಡಿದ್ದಕ್ಕಾಗಿ ಬಂಧಿಸಲಾಗಿತ್ತು. ಬಳಿಕ ಮೂವರಿಗೂ ನ್ಯಾಯಾಲಯ ಜಾಮೀನು ನೀಡಿತ್ತು. ಸಂದರ್ಶನಗಳಲ್ಲಿ, ಸೀಮಾ ಹೈದರ್ PUBG ಆಡುವಾಗ ಸಂಜಯ ಮೀನಾ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು ಮತ್ತು ಆತನನ್ನು ಭೇಟಿಯಾಗಲು ಭಾರತಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ.
ನಿಮ್ಮ ಕಾಮೆಂಟ್ ಬರೆಯಿರಿ