ಭೋಪಾಲ್: ಪ್ರಾಜೆಕ್ಟ್ ಚೀತಾ ಇನಿಷಿಯೇಟಿವ್ ಅಡಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಈಗ ಮತ್ತೊಂದು ಚೀತಾ ಮೃತಪಟ್ಟಿದೆ. ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ಸೂರಜ್ ಎಂಬ ಹೆಸರಿನ ಗಂಡು ಚೀತಾ ಮೃತಪಟ್ಟಿದೆ.
ಶುಕ್ರವಾರ ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಸೂರಜ್ ಶವವಾಗಿ ಪತ್ತೆಯಾಗಿದೆ. ಈ ಉದ್ಯಾನದಲ್ಲಿ ಸುಮಾರು 4 ತಿಂಗಳುಗಳ ಅವಧಿಯಲ್ಲಿ ಮೃತಪಟ್ಟ 8ನೇ ಚೀತಾ ಇದಾಗಿದೆ. ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಂಗಳವಾರವಷ್ಟೇ ಗಂಡು ಚೀತಾ ತೇಜಸ್ ಶವವಾಗಿ ಪತ್ತೆಯಾಗಿತ್ತು. ಈ ಚೀತಾ ಸಾವಿಗೀಡಾಗಲು ಮಿಲನ ಸಮಯದಲ್ಲಿ ತಲೆಗೆ ಆದ ಗಾಯ ಕಾರಣವಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈಗ ಸೂರಜ್ ಕೂಡ ಮೃತಪಟ್ಟಿದೆ. 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿದ್ದು, ಸೂರಜ್ ಸಾವಿನ ಬಳಿಕ ಇನ್ನು 12 ಚೀತಾಗಳಷ್ಟೇ ಉಳಿದಿವೆ.
75 ವರ್ಷಗಳ ಬಳಿಕ ಮೊದಲ ಬಾರಿ ಭಾರತಕ್ಕೆ ಬಂದ ಚೀತಾಗಳಲ್ಲಿ ಮೊದಲನೆಯದು ಮಾರ್ಚ್ 27ರಂದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹೆಣ್ಣು ಚೀತಾ ಸಾಶಾ ಮೂತ್ರಪಿಂಡದ ಕಾಯಿಲೆಯಿಂದ ಮೃತಪಟ್ಟಿತ್ತು. ಅದೇ ಸಮಯದಲ್ಲಿ ಸಿಯಾಯಾ ಎಂಬ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಏಪ್ರಿಲ್ನಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಗಂಡು ಚೀತಾ ಉದಯ್ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವಿಗೀಡಾಗಿತ್ತು. ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದ ದಕ್ಷ ಎಂಬ ಹೆಣ್ಣು ಚೀತಾ 2 ಗಂಡು ಚೀತಾಗಳೊಂದಿಗೆ ನಡೆಸಿದ ಕಾದಾಟದ ವೇಳೆ ಸಾವಿಗೀಡಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ 8 ಚೀತಾಗಳನ್ನು ತಂದು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಬಳಿಕ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ತರಿಸಲಾಗಿತ್ತು. ಅವುಗಳಲ್ಲಿ 6 ಕಾಡಿನಲ್ಲಿದ್ದು, ಉಳಿದವು ಕುನೋ ಉದ್ಯಾನದ ವಿವಿಧ ಆವರಣಗಳಲ್ಲಿವೆ.
ನಿಮ್ಮ ಕಾಮೆಂಟ್ ಬರೆಯಿರಿ