ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ನೆರವಾಗಲು ಪ್ರಜಾ ಪ್ರತಿನಿಧಿ (ಸಿಟಿಜನ್ ವಾಲೆಂಟೀರ್ಸ್) ನೇಮಕಕ್ಕೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್‌ನಲ್ಲಿ ಅರ್ಜಿ ಸಲ್ಲಿಕೆ ಒತ್ತಡ ಕಡಿಮೆ ಮಾಡಲು ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಗೌರವ ಸೇವೆ ಆಧಾರದಲ್ಲಿ ಒಂದು ತಿಂಗಳ ಅವಧಿಗೆ ʼಪ್ರಜಾ ಪ್ರತಿನಿಧಿʼಗಳನ್ನು ನೇಮಕ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶುಕ್ರವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪ್ರಜಾ ಪ್ರತಿನಿಧಿ (ಸಿಟಿಜನ್ ವಾಲೆಂಟೀರ್ಸ್) ನೇಮಕವಾಗಲು ಬಯಸುವವರು ಆಯಾ ತಾಲೂಕಿನ ನಿವಾಸಿಗಳಾಗಿದ್ದು, 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಈ ಯೋಜನೆಯಡಿ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರಬೇಕು. ಪ್ರಜಾ ಪ್ರತಿನಿಧಿ” ಅವರನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಲಾಗುತ್ತದೆ. ದತ್ತಾಂಶದ ಗೌಪ್ಯತೆ, ಸುರಕ್ಷತೆ ಸಂಬಂಧ ಸ್ವಯಂ ಘೋಷಣೆ ಮಾಡಬೇಕಿದ್ದು, ದುರುಪಯೋಗ ಮಾಡಿದರೆ ಕಾನೂನು ಕ್ರಮಕ್ಕೆ ಒಳಪಡಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ, ಪ್ರಜಾ ಪ್ರತಿನಿಧಿಗಳು ಉದ್ದೇಶಿತ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ. ಜೊತೆಗೆ, ನಾಗರಿಕರ ಪರವಾಗಿ ಅರ್ಜಿ ಸಲ್ಲಿಸುತ್ತಾರೆ. ʼಪ್ರಜಾ ಪ್ರತಿನಿಧಿʼಗಳು ಈ ಸೇವೆಯನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದು ಅವರಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಪ್ರಜಾ ಪ್ರತಿನಿಧಿ (ಸಿಟಿಜನ್ ವಾಲೆಂಟೀರ್ಸ್) ಆಯ್ಕೆ ಮಾಡುತ್ತಾರೆ. 1,000 ಜನಸಂಖ್ಯೆಗಿಂತ ಕಡಿಮೆ ಅಥವಾ ಅದಕ್ಕೆ ಸಮನಾದ ಪ್ರತಿ ಗ್ರಾಮಕ್ಕೆ ಇಬ್ಬರು ಪ್ರಜಾ ಪ್ರತಿನಿಧಿ (ಸಿಟಿಜನ್ ವಾಲೆಂಟೀರ್ಸ್) ಆಯ್ಕೆ ಮಾಡಲಾಗುತ್ತಿದೆ. ನಂತರ ಪ್ರತಿ 500 ಜನಸಂಖ್ಯೆಗೆ, ಒಂದು ಹೆಚ್ಚುವರಿಯಾಗಿ ನಾಗರಿಕ ಸೇವಾಕರ್ತರನ್ನು ಆಯ್ಕೆ ಮಾಡಲಾಗುತ್ತದೆ. ನಗರ ಪುದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ್ಡಿನಲ್ಲಿ 1,000 ಜನಸಂಖ್ಯೆಗೆ ಇಬ್ಬರು ಪ್ರಜಾ ಪ್ರತಿನಿಧಿ (ಸಿಟಿಜನ್ ವಾಲೆಂಟೀರ್ಸ್) ಆಯ್ಕೆ ಮಾಡಲಾಗುತ್ತದೆ. ಪ್ರತಿ ಹೆಚ್ಚುವರಿ 500 ಜನ ಸಂಖ್ಯೆಗೆ ಒಂದು ಹೆಚ್ಚುವರಿ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಆಗಸ್ಟ್ 16 ರಿಂದ ಗೃಹ ಲಕ್ಷ್ಮೀ ಅಕೌಂಟಿಗೆ ಹಣ ಜಮಾವಣೆಯಾಗಲಿದೆ ಎಂದು ಸರ್ಕಾರ ಈ ಮುಂಚೆಯೇ ಘೋಷಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ