
ಹಾಸನ : ಹೊಲದಲ್ಲಿ ಕಣ್ಣಿಗೆ ಬಿದ್ದ ಚಿರತೆಯನ್ನು ವ್ಯಕ್ತಿಯೊಬ್ಬರು ಸಾಹಸಪಟ್ಟು ಸೆರೆ ಹಿಡಿದು, ನಂತರ ತನ್ನದೇ ಬೈಕಿನಲ್ಲಿ ಕಟ್ಟಿಕೊಂಡು ಬಂದು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಬಾಗೀವಾಳು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಾಗೀವಾಳು ಗ್ರಾಮದ ವೇಣುಗೋಪಾಲ ಎಂಬವರು ಜಮೀನಿಗೆ ಹೋಗಿದ್ದಾಗ ಅವರಿಗೆ ಚಿರತೆ ಕಾಣಿಸಿಕೊಂಡಿದೆ. ಆಗ ಅವರು ಅದನ್ನು ಹರಸಾಹಸಪಟ್ಟು ಹಿಡಿದಿದ್ದಾರೆ. ನಂತರ ಅದು ಹಾನಿ ಮಾಡಬಾರದು ಎಂದು ತಮ್ಮ ಹೊಲದಲ್ಲಿದ್ದ ಹನಿ ನೀರಾವರಿಗೆ ಬಳಸುವ ಪ್ಲಾಸ್ಟಿಕ್ ಪೈಪಿನಿಂದ ಅದರ ಕಾಲುಗಳನ್ನು ಕಟ್ಟಿಹಾಕಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅದನ್ನು ನಂತರ ತಮ್ಮ ಬೈಕ್ ಹಿಂಬದಿಗೆ ಕಟ್ಟಿಕೊಂಡು ಬಂದು ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅರಣ್ಯ ಇಲಾಖೆಯವರು ಪಶು ವೈದ್ಯಕೀಯ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಹಿಡಿಯುವ ವೇಳೆ ವೇಣುಗೋಪಾಲ ಅವರ ಕೈಗೆ ತರಚಿದ ಗಾಯಗಳಾಗಿವೆ. ಅವರು ಸಾಹಸ ಕಾರ್ಯ ಮಾಡಿ ಚಿರತೆ ರಕ್ಷಣೆ ಮಾಡಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ