ಯೋಗ ವಿಜ್ಞಾನ-ನ್ಯಾಚುರೋಪಥಿ ಜನಪ್ರಿಯಗೊಳಿಸುತ್ತಿರುವ ಡಾ. ವಿವೇಕ ಉಡುಪ

(೧೬-೦೭-೨೦೨೩) ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಸಾಯಂಕಾಲ ೫.೦೦ ರಿಂದ ೭.೦೦ ವರೆಗೆ ಯೋಗ ಪರ್ಯಟನ ಕಾರ್ಯಕ್ರಮವಿದೆ)
ಡಾ. ಎ. ವಿವೇಕ ಉಡುಪ ಅವರು ಡಿವೈನ್ ಪಾರ್ಕ್‌ ಅಂಗಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕರು ಮತ್ತು ಡಿವೈನ್ ಪಾರ್ಕ್‌ ಟ್ರಸ್ಟಿಗಳಲ್ಲಿ ಒಬ್ಬರು. ಸರ್ವಕ್ಷೇಮ ಆಸ್ಪತ್ರೆಯ ಮೂಲಕ ಸಾವಿರಾರು ರೋಗಿಗಳಿಗೆ ಪ್ರಕೃತಿ ಮತ್ತು ಯೋಗ ಚಿಕಿತ್ಸೆ ಮೂಲಕ ಉಪಚಾರ ನೀಡುತ್ತ ಭರವಸೆ ಮೂಡಿಸುತ್ತಿದ್ದಾರೆ.
ಉಜಿರೆಯ ಎಸ್.ಡಿ.ಎಂ. ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಪದವೀಧರರಾದ ಅವರು ವಾಗ್ಮಿಗಳು, ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಸ್ವರ್ಣ ಪದಕದೊಂದಿಗೆ ೨ನೇ ರ‍್ಯಾಂಕ್ ಪಡೆದಿದ್ದಾರೆ. ೨೦೦೩ರಲ್ಲಿ ಎಸ್.ಡಿ.ಎಂ. ಬಿ.ಎನ್. ವೈ. ಎಸ್. ಪದವಿ ಪಡೆದ ಅವರು ಎಸ್.ಡಿ.ಎಂ. ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಮತ್ತು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಯೋಗ ವಿಜ್ಞಾನ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಿಂದ ೨೦೦೮ ರಲ್ಲಿ ಎಂ.ಡಿ. ಪಡೆದ ಮೊಟ್ಟ ಮೊದಲಿಗರಾಗಿದ್ದಾರೆ.
ವೈದ್ಯಕೀಯ ನಿರ್ದೇಶಕರಾಗಿ :
೦೧.೦೨.೨೦೨೦ ರಿಂದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯ ವೈದ್ಯಾಧಿಕಾರಿಗಳಾಗಿ ಅನೇಕ ಯೋಗ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಪ್ರಶಾಂತವಾದ ೧೧.೫ ಎಕರೆ ಜಾಗದಲ್ಲಿ ಪ್ರಕೃತಿ, ಯೋಗ, ಆಹಾರ, ಆಧ್ಯಾತ್ಮಿಕ, ಸಂಗೀತ, ಹಾಸ್ಯ, ಬೆಳಕು ಮತ್ತು ಮೌನ ಚಿಕಿತ್ಸೆಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ.
ವಿದೇಶಗಳಲ್ಲಿಯೂ ಶಿಬಿರಗಳನ್ನು ಹಮ್ಮಿಕೊಂಡು ಯೋಗ ಚಿಕಿತ್ಸಾ ಪದ್ಧತಿಯ ಜ್ಞಾನ ಹಂಚುತ್ತಿದ್ದಾರೆ. ಈವರೆಗೆ ಸುಮಾರು ೬೨,೮೦೦ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಡಾ. ಉಡುಪ ಅವರ ಸೇವೆ ಪರಿಗಣಿಸಿ ಯೋಗ ವಿಜ್ಞಾನ ಮತ್ತು ನ್ಯಾಚುರೋಪಥಿ ಕ್ಷೇತ್ರದಲ್ಲಿ ಇವರ ಕೊಡುಗೆ ಮೆಚ್ಚಿ ಟೈಮ್ಸ ಗ್ರುಪ್ ಇವರಿಗೆ ತನ್ನ ಪ್ರತಿಷ್ಠಿತ ಟೈಮ್ಸ್‌ ಹೆಲ್ತ್‌ ಎಕ್ಸಲೆನ್ಸ್ ಪುರಸ್ಕಾರ ನೀಡಿ ಗೌರವಿಸಿದೆ. ಎಕನಾಮಿಕ್ ಟೈಮ್ಸ್ ಇವರನ್ನು ೨೦೨೦ರ ಎಕನಾಮಿಕ್ ಟೈಮ್ಸ್ ಪವರ ಐಕಾನ್ ಎಂದು ಆಯ್ಕೆ ಮಾಡಿದೆ. ಅವರಿಗೆ ೧೩ಕ್ಕೂ ಹೆಚ್ಚಿನ ಪ್ರಶಸ್ತಿಗಳು ಸಂದಿವೆ.

ಆರೋಗ್ಯಕರ ಜೀವನ ಶೈಲಿಗೆ ಡಾ. ವಿವೇಕ ಉಡುಪರ ಸಲಹೆಗಳು :
• ದೈಹಿಕ, ಮಾನಸಿಕ, ಭಾವನಾತ್ಮಕ , ಸಾಮಾಜಿಕ ಹಾಗೂ ಆಧ್ಯಾತ್ಮಿಕ ಎಲ್ಲಾ ಸ್ತರಗಳ ಸಮತೋಲನವೇ ಪರಿಪೂರ್ಣ ಆರೋಗ್ಯದ ಲಕ್ಷಣ. ಆರೋಗ್ಯವೇ ದೊಡ್ಡ ಸಂಪತ್ತು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎನ್ನುವುದನ್ನು ಎಂದಿಗೂ ಮರೆಯದಿರೋಣ. ಆ ನಿಟ್ಟಿನಲ್ಲಿ ನಮ್ಮ ದೈನಂದಿನ ದಿನಚರಿಯಲ್ಲಿ ಈ ಕೆಳಗಿನ ಆರೋಗ್ಯ ರಕ್ಷಣಾ ಸೂತ್ರಗಳನ್ನು ಪಾಲಿಸಲೇಬೇಕು.
• ಬೆಳಗ್ಗೆ ೩೦ ನಿಮಿಷ ಸರಳ ಯೋಗಾಭ್ಯಾಸ
• ಸಂಜೆ ೩೦ ನಿಮಿಷ ವಾಕಿಂಗ್
• ಸಮಯಕ್ಕೆ ಸರಿಯಾಗಿ ಸರಳ , ಸಾತ್ವಿಕ, ಪೌಷ್ಟಿಕಾಂಶ ಆಹಾರ ಸೇವನೆ
• ರಾತ್ರಿ ೬ ರಿಂದ ೭ ಗಂಟೆ ನಿದ್ರೆ
• ದಿನದಲ್ಲಿ ಕನಿಷ್ಠ ಮೂರು ಲೀಟರ್ ನೀರು ಸೇವನೆ
• ೧ ಗಂಟೆಗಿಂತ ಜಾಸ್ತಿ ನಿರಂತರ ಕುಳಿತುಕೊಳ್ಳದಿರುವುದು, ಗಂಟೆಗೊಮ್ಮೆ ೫ ನಿಮಿಷ ಮನೆಯಲ್ಲಿ ವಾಕಿಂಗ್ ಮಾಡುವುದು.
• ರಾತ್ರಿ ಮಲಗುವ ಮುಂಚೆ ೧೦ ನಿಮಿಷ ಸತ್ಸಂಗ ಗ್ರಂಥ ಪಠಣ
• ಮನಸ್ಸಿನ ಶಾಂತಿ, ಸಮಾಧಾನ, ನೆಮ್ಮದಿಗೆ ಪ್ರಾರ್ಥನೆ, ಧ್ಯಾನ- ಇವುಗಳನ್ನು ಸಂತಸದಿಂದಲೇ ಅನುಷ್ಠಾನ ಮಾಡಲು ಪ್ರಯತ್ನಿಸುವುದು.
• ಎಣ್ಣೆಯಲ್ಲಿ ಕರಿದ, ಮಸಾಲೆ, ಸಿಹಿ ಹಾಗೂ ಜಂಕ್ ಫುಡ್‌ಗಳ ಸೇವನೆ ನಿಯಂತ್ರಿಸುವುದು.
• ಕಾಫಿ/ಟೀ, ಮದ್ಯಪಾನ, ಧೂಮಪಾನ ನಿಯಂತ್ರಿಸುವುದು ಅಥವಾ ತ್ಯಜಿಸಲು ಪ್ರಯತ್ನಿಸುವುದು.
• ದಿನಾಲೂ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನದ ವೇಳೆಯಲ್ಲಿ ಹತ್ತು ನಿಮಿಷಗಳಾದರೂ ವಿಶ್ವಮಯಿ ಪ್ರಾರ್ಥನೆ ಮಾಡುವುದು.
೨೨೫ ಕ್ಕೂ ಹೆಚ್ಚಿನ ವಿವೇಕ ಜಾಗೃತ ಬಳಗದ ಸದಸ್ಯರಾದವರಿಗೆ ಯೋಗ ಕಹಳೆ ಕಾರ‍್ಯಕ್ರಮದ ಮೂಲಕ ಯೋಗ ಮತ್ತು ಆರೋಗ್ಯ ಕುರಿತು ಜಾಗೃತ ಮೂಡಿಸುತ್ತಿದ್ದಾರೆ. ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಕುತ್ತಿಗೆ, ಸೊಂಟ, ಕಾಲು, ಬೆನ್ನು ನೋವು, ಅಧಿಕ ಬೊಜ್ಜು, ಅಸ್ತಮಾ, ಪಾರ್ಶವಾಯು, ಥೈರಾಡ್‌, ಚರ್ಮರೋಗ ಮೊದಲಾದ ಕಾಯಿಲೆಗಳ ಚಿಕಿತ್ಸೆ ಪಡೆದವರು ‘ಯೋಗ ಬನದ’ ಸೌಲಭ್ಯಗಳ ಕುರಿತು ಸಂತಸ ವ್ಯಕ್ತಪಡಿಸುತ್ತಾರೆ.
ಭಾರತದ ಯೋಗ ಪರಂಪರೆ ಪ್ರಾಚಿನವಾದದ್ದು. ಯೋಗವು ಯಾವುದೇ ಜಾತಿ ಮತ, ಪಂಥಗಳಿಗೆ ಸೇರಿದದ್ದಲ್ಲವೆಂದು ಪ್ರತಿಪಾದಿಸುವಅವರು ಅದು ಗಾಳಿ, ಬೆಳಕು, ನೀರಿನಂತೆ ಅದು ಎಲ್ಲರಿಗೂ ತಲುಪಬೇಕು ಎನ್ನುತ್ತಾರೆ. ಯೋಗ ಎಂದರೆ ಒಗ್ಗೂಡುವಿಕೆ, ಐಕ್ಯತೆ, ಸಾಮರಸ್ಯ ಎಂದು ಅರ್ಥೈಸಲಾಗುತ್ತಿದ್ದು, ದೇಹ ಮತ್ತು ಮನಸ್ಸು ಸದೃಢವಾಗಲು ಇದು ಅವಶ್ಯ ಎನ್ನುತ್ತಾರೆ.
ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಕಳೆದ ೧೩ ವರ್ಷಗಳಿಂದ ಉಚಿತವಾದ ಯೋಗ ವಿಹಾರ, ಧ್ಯಾನ ಯೋಗ, ಮಾತೃ ಯೋಗ, ಯೋಗ ರಕ್ಷಾ, ಯೋಗ ಶ್ರೀರಕ್ಷಾ ಶಿಬಿರಗಳನ್ನು ನಡೆಸುತ್ತಿದ್ದಾರೆ. ತಂದೆ ಡಾ. ಚಂದ್ರಶೇಖರ ಉಡುಪ, ತಾಯಿ ಜಯಲಕ್ಷ್ಮೀ, ಸಹೋದರಿ ನಿವೇದಿತಾ ಮಾರ್ಗದರ್ಶನ ಮತ್ತು ಪತ್ನಿ ವೈದ್ಯಾಧಿಕಾರಿ ಡಾ. ಶ್ರೀಮತಿ ಮಾನಸ, ಸ್ನೇಹಿತರು ಮತ್ತು ಸಿಬ್ಬಂದಿ ಸಹಕಾರದಿಂದಾಗಿ ಯೋಗ ಶಿಬಿರಗಳನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ.
ಮಾಹಿತಿಗಾಗಿ ಡಾ. ವಿವೇಕ ಉಡುಪ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ವೈದ್ಯಾಧಿಕಾರಿಗಳು, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಯೋಗ ಬನ, ಮೂಡು ಗಿಳಿಯಾರು, ಕೋಟ – ೫೭೬೨೨೧, ಜಿಲ್ಲೆ ಉಡುಪಿ ಈ-ಮೇಲ್ [email protected] ಸಂಪರ್ಕಿಸಬಹುದು.
– ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

3.9 / 5. 11

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement