ವಿರೋಧ ಪಕ್ಷಗಳ ಒಕ್ಕೂಟ VS ಬಿಜೆಪಿ ಮೈತ್ರಿ : ಪ್ರತಿಪಕ್ಷಗಳ ಸಭೆಗೆ ಸಮಾನಾಂತರವಾಗಿ ನಾಳೆ ಬಿಜೆಪಿ ನೇತೃತ್ವದಲ್ಲಿ 38 ಪಕ್ಷಗಳ ಎನ್‌ಡಿಎ ಸಮಾವೇಶ

ನವದೆಹಲಿ : ಮಂಗಳವಾರ (ಜುಲೈ 18) ದೆಹಲಿಯಲ್ಲಿ ನಡೆಯಲಿರುವ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಭಾಗವಹಿಸುವುದನ್ನು 38 ಪಕ್ಷಗಳ ನಾಯಕರು ಖಚಿತಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಎನ್‌ಡಿಎ ಬೆಳವಣಿಗೆ ಕುರಿತು ಮಾತನಾಡಿದ ಅವರು, ಎನ್‌ಡಿಎ ಮೈತ್ರಿ ಅಧಿಕಾರಕ್ಕಾಗಿ ಅಲ್ಲ, ಈ ಮೈತ್ರಿ ಸೇವೆಗಾಗಿ, ಭಾರತವನ್ನು ಬಲಪಡಿಸುವುದಕ್ಕಾಗಿ. ಈ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳು ಮತ್ತು ನೀತಿಗಳ ಸಕಾರಾತ್ಮಕ ಪರಿಣಾಮವೇ ಕಾರಣ ಎಂದು ಅವರು ಹೇಳಿದ್ದಾರೆ.
2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ಜಂಟಿ ಕಾರ್ಯತಂತ್ರವನ್ನು ರೂಪಿಸಲು ಬೆಂಗಳೂರಿನಲ್ಲಿ ಹಲವು ವಿರೋಧ ಪಕ್ಷಗಳು ಸಮಾಲೋಚನೆ ನಡೆಸಲು ಮಂಗಳವಾರ (ಜುಲೈ 18) ಸಭೆ ನಡೆಸುತ್ತಿದ್ದು, ಅದೇ ದಿನವೇ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟದ ಸಭೆಯನ್ನು ಆಯೋಜಿಸಲಾಗಿದೆ. ಎನ್‌ಡಿಎ ಸಭೆಯಲ್ಲಿ ಹಾಲಿ ಇರುವ ಮಿತ್ರ ಪಕ್ಷಗಳ ಜೊತೆಗೆ ಹೊಸ ಮಿತ್ರಪಕ್ಷಗಳು ಪಾಲ್ಗೊಳ್ಳುತ್ತಿವೆ.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಗೆ ಯಾವುದೇ “ಉದ್ದೇಶವೂ ಇಲ್ಲ, ನೀತಿ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವೂ ಇಲ್ಲ” ಮತ್ತು “ಭ್ರಷ್ಟಾಚಾರ ಮತ್ತು ಹಗರಣಗಳಿಂದ” ತುಂಬಿದೆ ಎಂದು ನಡ್ಡಾ ಪ್ರತಿಪಕ್ಷಗಳ ಸಭೆ ಬಗ್ಗೆ ವಾಗ್ದಾಳಿ ನಡೆಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಮುನ್ಸೂಚನೆ ನೀಡಿದ ಅವರು, ‘2024ರಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಬೇಕು ಎಂದು ದೇಶ ನಿರ್ಧರಿಸಿದೆ, ನಮ್ಮ ಒಗ್ಗಟ್ಟು ದೇಶದ ಹಿತಾಸಕ್ತಿ ಆಧರಿಸಿದೆ. ಇದು ಮುರಿಯಲಾಗದು, ಅದು ದೃಢವಾಗಿದೆ ಎಂದು ನಡ್ಡಾ ಹೇಳಿದರು.

ವಿರೋಧ ಪಕ್ಷಗಳ ಪಕ್ಕೂಟ VS ಬಿಜೆಪಿ ಮೈತ್ರಿ
ಬೆಂಗಳೂರಿನಲ್ಲಿ   ಬೃಹತ್ ಸಮಾವೇಶವನ್ನು ನಿಗದಿಪಡಿಸಲಾಗಿದ್ದು, 22 ವಿರೋಧ ಪಕ್ಷಗಳು ಭಾಗವಹಿಸುತ್ತಿವೆ.
ಕಾಂಗ್ರೆಸ್, ಜೆಡಿ (ಯು) ಮತ್ತು ಆರ್‌ಜೆಡಿ ಮತ್ತು ಇತರ ಪ್ರಮುಖ ವಿರೋಧ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಎಎಪಿ, ಸಿಪಿಐ(ಎಂ), ಸಿಪಿಐ, ಸಿಪಿಐ (ಎಂಎಲ್), ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳ ನಾಯಕರು 2024 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಐಕ್ಯ ಹೋರಾಟಕ್ಕಾಗಿಕಾರ್ಯತಂತ್ರ ರೂಪಿಸುವ ನಿರೀಕ್ಷೆಯಿದೆ. .
ಏತನ್ಮಧ್ಯೆ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್‌ಡಿಎ) ಜುಲೈ 18 ರಂದು ನವದೆಹಲಿಯಲ್ಲಿ ಸಭೆಯನ್ನು ಕರೆದಿದೆ, ಇದರಲ್ಲಿ 38 ಪಕ್ಷಗಳು ಭಾಗವಹಿಸಲಿವೆ ಎಂದು ಬಿಜೆಪಿ ಅಧ್ಯಕ್ಷರು ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಸೇರಿದಂತೆ ಹಲವಾರು ಹೊಸ ಮಿತ್ರಪಕ್ಷಗಳು ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಅವರಂತಹ ಕೆಲವು ಮಾಜಿ ಮಿತ್ರಪಕ್ಷಗಳು ಎನ್‌ಡಿಎ ಸಭೆಯಲ್ಲಿ ಭಾಗವಹಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ

ಪ್ರಮುಖ ಸುದ್ದಿ :-   ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟ ಮಧ್ಯೆ ಪಾಕ್‌ ಜತೆ ಟ್ರಂಪ್ ಕುಟುಂಬದ ರಹಸ್ಯ ಕ್ರಿಪ್ಟೋ ಒಪ್ಪಂದ...! ಇದಕ್ಕೆ ಪಾಕ್‌ ಸೇನಾ ಮುಖ್ಯಸ್ಥರ ಮಧ್ಯಸ್ಥಿಕೆ ?!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement