ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪಕಕ್ಕೆ ಸಂಬಂಧಿಸಿದಂತೆ ತೀಸ್ತಾ ಸೆತಲ್ವಾಡಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಅವರಿಗೆ ಜಾಮೀನು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅರ್ಜಿದಾರರಾದ ತೀಸ್ತಾ ಸೆತಲ್ವಾಡ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದಿಲ್ಲ ಮತ್ತು ಅವರಿಂದ ದೂರವಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂದು ವೇಳೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಸಿದರೆ, ಗುಜರಾತ್ ಪೊಲೀಸರು ನೇರವಾಗಿ ಸುಪ್ರೀಂ ಕೋರ್ಟ್‌ಗೆ ತೆರಳಲು ಸ್ವಾತಂತ್ರ್ಯವಿದೆ ಎಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ ಮತ್ತು ದೀಪಂಕರ ದತ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ತೀಸ್ತಾ ಸೆತಲ್ವಾಡ್ ಅವರ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಸೂಚಿಸಿದೆ. ಆಕೆಯ ವಿರುದ್ಧದ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಾಗಲೇ ಶರಣಾಗಿರುವ ಮೇಲ್ಮನವಿದಾರರ ಪಾಸ್‌ಪೋರ್ಟ್ ಸೆಷನ್ ನ್ಯಾಯಾಲಯದ ಕಸ್ಟಡಿಯಲ್ಲಿದೆ. ಮೇಲ್ಮನವಿದಾರರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯಾವುದೇ ಪ್ರಯತ್ನ ಮಾಡಬಾರದು ಮತ್ತು ಅವರಿಂದ ದೂರ ಉಳಿಯಬೇಕು” ಎಂದು ಪೀಠ ಹೇಳಿದೆ.
ತೀಸ್ತಾ ಸೆತಲ್ವಾಡಗೆ ಸುಪ್ರೀಂ ಕೋರ್ಟ್ ಜುಲೈ 1 ರಂದು ಮಧ್ಯಂತರ ರಕ್ಷಣೆ ನೀಡಿತ್ತು. ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರದ ಉನ್ನತ ಅಧಿಕಾರಿಗಳನ್ನು ಸಿಲುಕಿಸಲು ದಾಖಲೆಗಳನ್ನು ಸೃಷ್ಟಿಸಿ ಸಾಕ್ಷಿಗಳಿಗೆ ಬೋಧನೆ ಮಾಡಿದ ಆರೋಪ ಇವರ ಮೇಲಿದೆ.
2002ರ ಗುಜರಾತ್ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 2022 ರ ಸುಪ್ರೀಂ ಕೋರ್ಟ್ ತೀರ್ಪಿನ ಒಂದು ದಿನದ ನಂತರ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಸೆತಲ್ವಾಡ್ ಅವರನ್ನು ವಶಕ್ಕೆ ತೆಗೆದುಕೊಂಡಿತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2022ರ ಸೆಪ್ಟೆಂಬರ್‌ನಲ್ಲಿ ಆಕೆಗೆ ಮಧ್ಯಂತರ ಜಾಮೀನು ನೀಡಿತ್ತು. ನಂತರ ಗುಜರಾತ್ ಹೈಕೋರ್ಟ್ ಆಕೆಯ ಸಾಮಾನ್ಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಇದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಮನವಿ ಅರ್ಜಿ ಸಲ್ಲಿಸಲು ಕಾರಣವಾಯಿತು. ಕಳೆದ ತಿಂಗಳು ನಡೆದ ವಿಶೇಷ ಶನಿವಾರ ವಿಚಾರಣೆಯಲ್ಲಿ, ಪ್ರಸ್ತುತ ಪೀಠವು ಮೊದಲು ಅವರಿಗೆ ಏಳು ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ನಂತರ ಇದನ್ನು ಇಂದಿನವರೆಗೂ ವಿಸ್ತರಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ