ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು

(ಜುಲೈ ೨೨ ರಂದು ಪೂಜ್ಯರ ೬೦ನೇ ಜನ್ಮದಿನ, ಆ ನಿಮಿತ್ತ ಲೇಖನ)
ಕಾಯಕಯೋಗಿ, ನಡೆದಾಡುವ ದೇವರೆಂದೇ ಖ್ಯಾತಿಗಳಿಸಿದ್ದ ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀ ಸಿದ್ಧಲಿಂಗ ಸ್ವಾಮಿಗಳನ್ನು ೧೯೮೮ ಮಾರ್ಚ ೩ ರಂದು ನೇಮಕ ಮಾಡಿದ್ದರು. ಶೈಕ್ಷಣಿಕವಾಗಿ, ಅಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ಅನುಪಮ ಸೇವೆ ಸಲ್ಲಿಸುತ್ತ ಬಂದಿರುವ ಸಿದ್ಧಗಂಗಾ ಕ್ಷೇತ್ರದ ಹೊಣೆಗಾರಿಕೆ ತುಮಕೂರಿನ ಪೂಜ್ಯ ಸಿದ್ಧಲಿಂಗ ಶ್ರೀಗಳ ಹೆಗಲಿಗೆ ಬಂದಿತ್ತು. ಪೂಜ್ಯರಾದ ಡಾ.ಶಿವಕುಮಾರ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತಿರುವ ಈಗಿನ ಪೂಜ್ಯರಾದ ಸಿದ್ಧಲಿಂಗ ಶ್ರೀಗಳು ಚಿಕ್ಕನಿಂದಲೇ ಶರಣರಾಗಲು ಬಯಸಿದವರು. ಶಿಸ್ತು, ಸಜ್ಜನಿಕೆ, ಸರಳತೆ, ಸಂಯಮ ಸಂಸ್ಕಾರಗಳನ್ನು ಎಲ್ಲ ಮಕ್ಕಳಿಗೆ ಹೇಳಿಕೊಡುತ್ತ ಬಂದಿರುವ ಸಿದ್ಧಗಂಗಾಮಠದ ಹಿರಿಯ ಶ್ರೀಗಳು ಮತ್ತು ಈಗಿನ ಸಿದ್ಧಲಿಂಗ ಶ್ರೀಗಳು ಈರ್ವರು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನವರೇ ಆಗಿರುವುದು ವಿಶೇಷ.
ಮೂಲತಃ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠ ಗ್ರಾಮದವರಾದ ಶ್ರೀ ಸಿದ್ಧಲಿಂಗ ಶ್ರೀಗಳ ಪೂರ್ವಾಶ್ರಮದ ಹೆಸರು ವಿಶ್ವನಾಥಯ್ಯ ಎಂದು. ತಂದೆ ಸದಾಶಿವಯ್ಯ ಮತ್ತು ತಾಯಿ ಶಿವರುದ್ರಮ್ಮನವರ ೮ನೇ ಪುತ್ರರಾಗಿ ೧೯೬೩ ಜುಲೈ ೨೩ ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿದ ತರುವಾಯ ಕನಕಪುರದ ದೇಗುಲ ಮಠದಲ್ಲಿ ಪ್ರೌಢಶಿಕ್ಷಣ ಮುಗಿಸಿ, ಮುಂದಿನ ವಿಧ್ಯಾಭ್ಯಾಸಕ್ಕಾಗಿ ಸಿದ್ಧಗಂಗಾ ಮಠಕ್ಕೆ ಬಂದರು. ಚಿಕ್ಕನಿಂದಿನಿಂದಲೇ ಸನ್ಯಾಸ ದೀಕ್ಷೆ ಪಡೆದುಕೊಳ್ಳಬೇಕೆಂದ ಅಭಿಲಾಷೆ ಹೊಂದಿದ್ದ ಶ್ರೀಗಳು ಪೂಜ್ಯ ಶಿವಕುಮಾರ ಶ್ರೀಗಳ ಸೇವೆ ಮಾಡುತ್ತಲೇ ಬಂದರು. ಇವರ ಶ್ರದ್ಧೆ, ಆಸಕ್ತಿಯನ್ನು ಗಮನಿಸಿದ ಪೂಜ್ಯರು ಸನ್ಯಾಸ ದೀಕ್ಷೆ ನೀಡಿ, ತಮ್ಮ ಶಿಷ್ಯನಾಗಿ ಬೆಳಸಿ ಮಠದ ಮಹತ್ತರ ಜವಾಬ್ದಾರಿಯನ್ನು ನೀಡಿದ್ದಾರೆ.
ಸಿದ್ಧಲಿಂಗ ಶ್ರೀಗಳ ಪೂರ್ವಾಶ್ರಮ ತಂದೆ ಸದಾಶಿವಯ್ಯನವರು ಶಿಕ್ಷಕರಾಗಿದ್ದರು. ಕಂಚುಗಲ್ ಬಂಡೇಮಠ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ದಿನ ತಮ್ಮ ಮಗ ಸನ್ಯಾಸತ್ವ ದೀಕ್ಷೆ ಪಡೆಯುವುದಾಗಿ ಹೇಳಿದಾಗ ತಂದೆ ಸದಾಶಿವಯ್ಯನವರು ಸಮಾಜಕ್ಕೆ ನೀನು ಆಸ್ತಿಯಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆಯನ್ನು ಗುರಿಯನ್ನಾಗಿಸಿ ಮುಂದುವರಿ ಎಂದು ಪ್ರೋತ್ಸಾಹಿಸಿದರು.

ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

ಸಿದ್ಧಲಿಂಗ ಶ್ರೀಗಳು ಕಾಲೇಜು ಪದವಿಯನ್ನು ಸಿದ್ಧಗಂಗಾ ಮಠದಲ್ಲಿ ಪಡೆದರು. ಅಂದು ಬಂಡೇಮಠದ ಹಿರಿಯ ಶ್ರೀಗಳಾಗಿದ್ದ ಶಿವರುದ್ರ ಸ್ವಾಮೀಜಿ ಅವರ ಸಮಾಜ ಸೇವೆಯನ್ನು ನೋಡುತ್ತ ಸನ್ಯಾಸತ್ವ ದೀಕ್ಷೆ ಪಡೆಯಬೇಕೆಂದು ಮನಸ್ಸು ಮಾಡಿದ್ದರು. ಅಂತೆಯೇ ಸಿದ್ಧಗಂಗಾ ಹಳೆ ಮಠದಲ್ಲಿ ಸಂಸ್ಕೃತ ಮತ್ತು ವೇದಾಧ್ಯಯನ ಮಾಡಿದ ಸಿದ್ಧಲಿಂಗ ಶ್ರೀಗಳು ಅಧ್ಯಾತ್ಮಕ ಆಸಕ್ತಿ ಬೆಳೆಸಿಕೊಂಡು ಶಿವಕುಮಾರ ಸ್ವಾಮಿಗಳ ಸೇವೆಯಲ್ಲಿ ನಿರತರಾಗಿದ್ದರು.
೨೦೧೧ ಆಗಸ್ಟ್‌ ೪ ರಂದು ಹಸ್ತ ನಕ್ಷತ್ರ, ನಾಗರಪಂಚಮಿಯ ದಿನದಂದು ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರು ಶ್ರೀ ಕ್ಷೇತ್ರದ ಉತ್ತರಾಧಿಕಾರಿಗಳಾಗಿದ್ದ ಶ್ರೀ ಸಿದ್ಧಲಿಂಗ ಸ್ವಾಮಿಗಳಿಗೆ ಸಿದ್ಧಗಂಗಾ ಮಠದ ಅಧಿಕಾರವನ್ನು ಛಾಪಾ ಕಾಗದದ ಮೂಲಕ ಹಸ್ತಾಂತರಿಸಿದರು. ತಮ್ಮ ಕಚೇರಿಯಲ್ಲಿ ಕಿರಿಯ ಸ್ವಾಮೀಜಿಗಳ ಹೆಸರಿಗೆ ಬರೆಸಿದ ಉಯಿಲು ಪತ್ರವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಂದ ಓದಿಸಿ ಪೂಜ್ಯರು ಓದಿ ಸಹಿ ಹಾಕಿದ್ದರು. ಈ ಕಾರ‍್ಯಕ್ರಮಕ್ಕೆ ಅಪಾರ ಭಕ್ತರು ಸಾಕ್ಷಿಯಾಗಿದ್ದರು.

ಈ ಸಂದರ್ಭದಲ್ಲಿ ಹಿರಿಯ ಸ್ವಾಮೀಜಿ ಡಾ. ಶಿವಕುಮಾರ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಂದಿನಿಂದ ಇಂದಿನವರೆಗೆ ನಮ್ಮ ಆಜ್ಞಾನುಸಾರ ನಡೆದುಕೊಳ್ಳುತ್ತಿದ್ದು, ಮಠದ ಕಾರ್ಯಗಳನ್ನು ಸದಾಚಾರ, ಗುರುನಿಷ್ಠೆ ಮತ್ತು ಪೂಜಾ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಮಠದ ಪವಿತ್ರ ಪರಂಪರೆಯನ್ನು ಮುಂದುವರೆಸಿಕೊಂಡು, ಚಾರಿತ್ರ್ಯ ಸಂಪನ್ನರಾಗಿ ರೂಪುಗೊಂಡಿದ್ದಾರೆ. ಸಿದ್ಧಲಿಂಗ ಸ್ವಾಮೀಜಿಗಳಿಗೆ ಅಧಿಕಾರ ವಹಿಸಿಕೊಟ್ಟರೆ, ಮಠದ ಶ್ರೇಯೋಭಿವೃದ್ಧಿಯಾಗುತ್ತದೆ ಎಂಬ ಬಗ್ಗೆ ದೃಢ ನಂಬಿಕೆ ಇದೆ ಎಂದು ಹೇಳಿದ್ದರು.
ಪೀಠಾಧಿಪತಿಯಾದರೂ ಕೂಡ ತುಂಬು ವಿನಯದಿಂದ ಹಿರಿಯ ಶ್ರೀಗಳ ನೆರಳಿನಲ್ಲಿಯೇ ಇದ್ದು ತಮ್ಮ ಕಾರ್ಯನಿರ್ವಹಿಸಿದ್ದರು. ಅಂತೆಯೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ಸಿದ್ಧಲಿಂಗ ಶ್ರೀಗಳು, ಅವರ ಆಶೀರ್ವಾದ ಶ್ರೀರಕ್ಷೆಯಿಂದ ಅವರ ಎಲ್ಲ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ. ಅವರ ಜೀವನ ಪದ್ಧತಿ, ಅವರು ನಡೆದ ದಾರಿ ಸವಾಲಿನಿಂದ ಕೂಡಿತ್ತು. ಅಂತಹ ಸವಾಲುಗಳನ್ನೆಲ್ಲ ಮೆಟ್ಟಿನಿಂತು ಸಾಧನೆ ಮಾಡಿದರು. ನನಗೆ ಇದೊಂದು ಪರೀಕ್ಷೆ ಎಂದು ಹೇಳುತ್ತ ಮಠದ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪಾಲನೆ, ಪೋಷಣೆ ಮಾಡುತ್ತ ಅದರಲ್ಲಿ ಸ್ವಚ್ಛತೆ, ಆರೋಗ್ಯ, ಓದುವ ಸಂಸ್ಕೃತಿ ಮುಂತಾದ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದ್ದಾರೆ.
-ಡಾ. ಬಿ. ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement