ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಮುಖಂಡ ಮದನದಾಸ ದೇವಿ (81) ಅವರು ಸೋಮವಾರ (ಜುಲೈ 24) ಬೆಳಿಗ್ಗೆ ನಿಧನರಾದರು.
ಮೂಲತಃ ಮಹಾರಾಷ್ಟ್ರದವರಾದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಮುಂಜಾನೆ 5 ಗಂಟೆಗೆ ರಾಜರಾಜೇಶ್ವರಿ ನಗರದ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪಾರ್ಥೀವ ಶರೀರವನ್ನು ಆರ್‌ಎಸ್‌ಎಸ್ ಸ್ಥಳೀಯ ಪ್ರಧಾನ ಕಚೇರಿ ಕೇಶವ ಕೃಪಾದಲ್ಲಿ ಮಧ್ಯಾಹ್ನ 1:30ರಿಂದ 4 ಗಂಟೆಯವರೆಗೆ ದರ್ಶನಕ್ಕೆ ಇರಿಸಲಾಗುವುದು. ಮಂಗಳವಾರ ಪುಣೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದರು. ಇಂದು ನೀವು ನೋಡುತ್ತಿರುವ ರಾಷ್ಟ್ರೀಯ ಮಟ್ಟದ ಉನ್ನತ ಮಟ್ಟದ ಬಿಜೆಪಿ ನಾಯಕರಲ್ಲಿ ನಾಯಕತ್ವದ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಅವರು ಜವಾಬ್ದಾರರಾಗಿದ್ದರು ಎಂದು ಆರ್‌ಎಸ್‌ಎಸ್ ಕಾರ್ಯಕಾರಿ ಹೇಳಿದೆ.
ಮದನ್ ದಾಸ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ‘ಮದನ್ ಅವರು ತಮ್ಮ ಪೂರ್ಣ ಜೀವನವನ್ನು ಆರ್‌ಎಸ್‌ಎಸ್‌ಗಾಗಿ ಮುಡಿಪಿಟ್ಟಿದ್ದರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ, ಅವರನ್ನು ಕಳೆದುಕೊಂಡ ಕುಟುಂಬ ಹಾಗೂ ಕಾರ್ಯಕರ್ತರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ