ರಾಜ್ಯಪಾಲ ಗೆಹ್ಲೋಟ್‌ ಅವರನ್ನೇ ಬಿಟ್ಟು ಹಾರಿದ ಏರ್ ಏಷ್ಯಾ ವಿಮಾನ ; ನಂತರ ಕ್ಷಮೆಯಾಚನೆ

ಬೆಂಗಳೂರು: ಹೈದರಾಬಾದಿಗೆ ತೆರಳಬೇಕಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಏರ್ ಏಷ್ಯಾ ವಿಮಾನ ಬಿಟ್ಟು ಹೋದ ಘಟನೆ ಶುಕ್ರವಾರ ನಡೆದಿದೆ.
ರಾಜ್ಯಪಾಲರನ್ನು ಬಿಟ್ಟು ಹಾರಿದ್ದ ವಿಮಾನಯಾನ ಸಂಸ್ಥೆ ವಿರುದ್ಧ ರಾಜ್ಯಪಾಲರ ಕಚೇರಿ “ಶಿಷ್ಟಾಚಾರ ಉಲ್ಲಂಘನೆ” ಪ್ರಕರಣ ದಾಖಲಿಸಿದ ಬೆನ್ನಲ್ಲೇ ವಿಮಾನಯಾನ ಸಂಸ್ಥೆ ಇದಕ್ಕೆ ವಿಷಾದಿಸಿದೆ.
ರಾಜ್ಯಪಾಲರ ಕಚೇರಿ ಅಧಿಕಾರಿಗಳು ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಐಎಕ್ಸ್ ಕನೆಕ್ಟ್ ಹಾಗೂ ಇದಕ್ಕೆ ಕಾರಣರಾದ ಏರ್‌ಲೈನ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಗುರುವಾರ ಮಧ್ಯಾಹ್ನ 1:30 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು ಆಗಮಿಸಿದ್ದರು. ಅವರು 2 ಗಂಟೆ ವಿಮಾನದಲ್ಲಿ ಹೈದರಾಬಾದಿಗೆ ತೆರಳಬೇಕಿತ್ತು. ರಾಜ್ಯಪಾಲರನ್ನು ವಿಐಪಿ ಲಾಂಜ್‌ನಲ್ಲಿ ಕುಳ್ಳಿರಿಸಿದ ಅಧಿಕಾರಿಗಳು ಅವರು ಲಗೇಜುಗಳನ್ನು ಏರ್‌ ಏಶಿಯಾ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ಲಗೇಜ್‌ ಹಾಕಿಕೊಂಡ ವಿಮಾನ ರಾಜ್ಯಪಾಲರನ್ನು ಬಿಟ್ಟು ಹೈದರಾಬಾದಿಗೆ ಹಾರಿದೆ. ರಾಜ್ಯಪಾಲರು ಬರಲು ಒಂದು ನಿಮಿಷ ತಡವಾಗಿದ್ದಕ್ಕೆ ಅವರನ್ನು ಬಿಟ್ಟು ತೆರಳಿದೆ. ಅದು ಕೂಡ ಪ್ರೊಟೊಕಾಲ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿದೆ. ಅವರು ನಂತರ ಮತ್ತೊಂದು ವಿಮಾನದ ಮೂಲಕ ಹೈದರಾಬಾದಿಗೆ ತೆರಳಿದ್ದಾರೆ. ನಂತರ ಹಿರಿಯ ಅಧಿಕಾರಿಗಳು ಘಟನೆ ಕುರಿತು ಮಾಹಿತಿ ಕೇಳಿದ್ದಾರೆ. ಹಾಗೂ ರಾಜ್ಯಪಾಲರ ಪ್ರೋಟೋಕಾಲ್ ಅಧಿಕಾರಿ ಎಂ.ವೇಣುಗೋಪಾಲ ಅವರು ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿದ ಬೆನ್ನಲ್ಲೇ ಏರ್‌ ಏಶಿಯಾ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ಹಾಗೂ ರಾಜ್ಯಪಾಲರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ.
ಘಟನೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಐಎಕ್ಸ್ ಕನೆಕ್ಟ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement