ಶಾಸಕರ ಅಸಮಾಧಾನಕ್ಕೆ ಸಿದ್ದರಾಮಯ್ಯ ಮದ್ದು : ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ – ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಭರವಸೆ

ಬೆಂಗಳೂರು : ವರ್ಗಾವಣೆ ಹಾಗೂ ಅನುದಾನದ ವಿಚಾರದಲ್ಲಿ ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಗುರುವಾರ ರಾತ್ರಿ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಿತು.
ಆಡಳಿತಾತ್ಮಕ ಒತ್ತಡಗಳ ನಡುವೆಯೂ ಪ್ರತಿ ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆಯುತ್ತೇನೆ. ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಅಲ್ಲಿ ಚರ್ಚಿಸುತ್ತೇನೆ. ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ ಎಂದು ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಶಾಸಕರಿಗೆ ಭರವಸೆ ನೀಡಿದರು. ಅಲ್ಲದೆ, ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ ಅಥವಾ ಪಕ್ಷದ ವೇದಿಕೆಯಲ್ಲಿ ಮಾತ್ರ ಚರ್ಚಿಸಿ ಎಂದು ಸೂಚಿಸಿದರು.
ಕೆಲವು ಶಾಸಕರು ಅಸಮಾಧಾನಗೊಂಡು ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಯಲು ಒತ್ತಾಯಿಸಿದ್ದಾರೆ. ಆದರೆ ಏನೇ ಸಮಸ್ಯೆ ಹಾಗೂ ಅಸಮಾಧಾನವಿದ್ದರೂ ನನ್ನ ಗಮನಕ್ಕೆ ತನ್ನಿ ಅಥವಾ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ. ಅದನ್ನು ಬಹಿರಂಗವಾಗಿ ಚರ್ಚೆ ಮಾಡುವುದು ಅಥವಾ ಮಾಧ್ಯಮಗಳ ಮುಂದೆ ಹೋಗುವುದು ಬೇಡ ಎಂದು ಸಲಹೆ ನೀಡಿದರು.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್​ ಉಚ್ಚಾಟನೆ

ಹೊಸ ಸರ್ಕಾರ ಬಂದ ಬಳಿಕ ನಮ್ಮ ಎದುರಿಗೆ ತಕ್ಷಣಕ್ಕೆ ರಾಜ್ಯದ ಆರ್ಥಿಕತೆ ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿ ಇತ್ತು. ಬಜೆಟ್‌ ರೂಪಿಸುವ ಹೊಣೆಗಾರಿಕೆ ಇತ್ತು. ಹೊಸ ಸರ್ಕಾರವಾದ್ದರಿಂದ ಜಂಟಿ ಅಧಿವೇಶನವನ್ನೂ ಕರೆಯಬೇಕಿತ್ತು. ಈ ಬಜೆಟ್‌ ಅತ್ಯಂತ ಮಹತ್ವದ್ದಾಗಿತ್ತು. ಯಾಕೆಂದರೆ ನಾವು ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು 58 ಸಾವಿರ ಕೋಟಿ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು. ಹೀಗಾಗಿ ಈ ಆಯವ್ಯಯದಲ್ಲಿ ಐದು ಗ್ಯಾರಂಟಿಗಳಿಗೆ ಹಣ ಮೀಸಲಿಡಬೇಕಿತ್ತು. ಆದ್ದರಿಂದ ನಾನೇ ಸ್ವತಃ ಬಜೆಟ್ ಸಿದ್ಧತೆಗೆ ಕೂರುವುದು ಅನಿವಾರ್ಯವಾಗಿತ್ತು. ಈ ಎಲ್ಲಾ ಕಾರಣಗಳಿಂದ ಈ ಬಗ್ಗೆ ಗಮನ ಕೊಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
ಅಧಿವೇಶನದ ನಡುವೆ ರಾಷ್ಟ್ರ ಮಟ್ಟದ ವಿಪಕ್ಷಗಳ ನಾಯಕರ ಸಭೆ ನಡೆಸಿದೆವು. ಅದು ಮುಗಿಯುತ್ತಿದ್ದಂತೆ ಪಕ್ಷದ ವರಿಷ್ಠರು ಶಾಸಕರು ಮತ್ತು ಸಚಿವರ ಜೊತೆ ಸಭೆ ನಡೆಸಲು ನಿರ್ಧರಿಸಿದ್ದರು. ಈ ಕಾರಣಗಳಿಂದ ಶಾಸಕಾಂಗ ಸಭೆ ಕರೆಯುವುದು ತಡವಾಯ್ತು ಎಂದು ಹೇಳಿದರು.

ಬಿಜೆಪಿ ಸುಳ್ಳಿನ ಕಾರ್ಖಾನೆ:
ಬಿಜೆಪಿ ಪರಿವಾರ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಬಳಿಕ ಆ ಸುಳ್ಳನ್ನು ಹರಡಿಸುತ್ತಾರೆ. ಕೊನೆಗೆ ಅದೇ ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡುತ್ತಾರೆ ಈ ಬಗ್ಗೆ ಎಚ್ಚರದಿಂದಿರಬೇಕು. ಇದನ್ನೆಲ್ಲಾ ನಾವು ಸರಿಯಾಗಿ ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
ಶಾಸಕರೊಬ್ಬರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ಸುದ್ದಿ ಮಾಡಿಸಿದ್ದು ಈ ಕುತಂತ್ರದ ಭಾಗವೇ ಆಗಿದೆ. ಈಗ ಶಾಸಕರೇ ಆ ಪತ್ರ ತಮ್ಮದಲ್ಲ ಎಂದು ಸ್ಪಷ್ಟನೆ ನೀಡಿದ್ದಾಗಿದೆ. ಆದರೆ ಸತ್ಯ ಏನೆಂಬುದು ಗೊತ್ತಾಗುವುದರೊಳಗೆ ಅವರು ಸುಳ್ಳನ್ನು ವ್ಯಾಪಕವಾಗಿ ಹರಡಿದ್ದಾರೆ. ಸುಳ್ಳಿನ‌ ಸರಮಾಲೆಗಳ ಮೂಲಕ ಅವರು ಐದು ಗ್ಯಾರಂಟಿಗಳ ಯಶಸ್ಸಿನಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಈ ಬಗ್ಗೆ ಪ್ರತಿಯೊಬ್ಬ ಶಾಸಕರೂ ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.

ಪ್ರಮುಖ ಸುದ್ದಿ :-   ಕಾರು - ಟ್ರಕ್ ನಡುವೆ ಭೀಕರ ಅಪಘಾತ; 6 ಮಂದಿ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement