ನಂದಿನ ಹಾಲಿನ ದರ ಏರಿಕೆ, 67 ಕೈದಿಗಳ ಬಿಡುಗಡೆ ಸೇರಿದಂತೆ 13 ಪ್ರಮುಖ ಪ್ರಸ್ತಾವಗಳಿಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆ ಸಹಿತ 13 ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ಒಟ್ಟು ಹದಿನೈದು ವಿಚಾರಗಳ ಬಗ್ಗೆ ಇಂದಿನ ಕ್ಯಾಬಿನೆಟ್ ಚರ್ಚೆ ನಡೆಸಿದೆ. ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅದರಂತೆ ಪ್ರತಿ ಲೀಟರ್‌ಗೆ ₹3 ರೂಪಾಯಿ ಹೆಚ್ಚಳವಾದ ಆಗಸ್ಟ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಸನ್ನಡತೆಯ ಆಧಾರದ ಮೇಲೆ ರಾಜ್ಯದ ಹಲವು ಬಂಧಿಖಾನೆಗಳಿಂದ  67 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಆಗಸ್ಟ್ 15ಕ್ಕೆ ಬಿಡುಗಡೆ ಭಾಗ್ಯ ಸಿಗಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ 24, ಮೈಸೂರಿನಿಂದ 8, ಬೆಳಗಾವಿಯಿಂದ 2, ಕಲಬುರಗಿಯಿಂದ 5, ಶಿವಮೊಗ್ಗದಿಂದ 12, ಬಳ್ಳಾರಿಯಿಂದ 8, ಧಾರವಾಡ ಸೆಂಟ್ರಲ್ ಜೈಲಿನಿಂದ 2 ಕೈದಿಗಳು ಬಿಡುಗಡೆಗೊಳ್ಳಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ ಮಾಹಿತಿ ನೀಡಿದ್ದಾರೆ.
ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿನ ಒತ್ತುವರಿ ಪ್ರದೇಶಗಳ ಆಡಿಟ್ ಗೆ ನಿರ್ದೇಶನ ನೀಡಲಾಗಿದೆ ಎಂದ ಸಚಿವರು, ಒತ್ತುವರಿಯಲ್ಲಿ ಖನಿಜ ತೆಗೆದು ಬಳಕೆ ಮಾಡಿದ್ದರೆ ಅಂತಹವರಿಗೆ ದಂಡ ಹಾಕಲಾಗುತ್ತದೆ. ಈ ಬಾರಿ ಅಂತಹ ದಂಡಕ್ಕೆ ಒನ್ ಟೈಂ ಸೆಟ್ಲಮೆಂಟ್ ಗೆ ಅವಕಾಶ ನೀಡಲಾಗಿದೆ. 6105 ಕೋಟಿ ದಂಡ ವಸೂಲಿ ಆಗಬೇಕಿದೆ. ಕ್ಯಾಬಿನೆಟ್ ಸಬ್ ಕಮಿಟಿ ಮಾಡಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಎಂದು ಮಾಹಿತಿ ನೀಡಿದರು.
ಸಹಕಾರ ಇಲಾಖೆಯಲ್ಲಿ ಆರ್‌ಐಡಿಎಫ್‌-28 ಯೋಜನೆಯಡಿ ಎಪಿಎಂಸಿಗಳಿಗೆ ರಸ್ತೆ ಮಾಡಲು, ಇತರೆ ಮೂಲಭೂತ ಸೌಲಭ್ಯ ಕಲ್ಪಿಸಲು 130. 40 ಕೋಟಿ ಮಂಜೂರಿಗೆ ಒಪ್ಪಿಗೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಮೊಟ್ಟೆ ವಿತರಣೆಯನ್ನು ವಿಭಾಗವಾರು ಖರೀದಿಸಿ, ವಿತರಿಸಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕಿರಿಯ ಶ್ರೇಣಿ ತಹಶೀಲ್ದಾರ ಹುದ್ದೆಗೆ ಕಾನೂನು ಹೋರಾಟ ನಡೆಸಿದ್ದ ಡಾ. ಮೈತ್ರಿ ಅವರ ಮನವಿಯನ್ನು ಸರ್ಕಾರ ಪುರಸ್ಕಾರ ಮಾಡಿದೆ. 2011ರಿಂದ ಕಾನೂನು ಹೋರಾಟ ನಡೆಸಿದ್ದ ಮೈತ್ರಿಯವರನ್ನು ಕೆಎಎಸ್ ಹುದ್ದೆಗೆ ಪರಿಗಣನೆ ಮಾಡಲಾಗಿದೆ ಎಂದು ಕಾನೂನು ಸಚಿವರು ತಿಳಿಸಿದರು.
ಕೊಡವ ಸಮುದಾಯದ ಹೆಸರನ್ನು ಕೊಡವರು ಎಂದು ಮಾಡಲು ಒಪ್ಪಿಗೆ ನೀಡಲಾಗಿದೆ. ಲೋಕಾಯುಕ್ತ ವಿಚಾರಣಾ ನಿಬಂಧಕರಾಗಿ ನಿವೃತ್ತ ನ್ಯಾಯಾಧೀಶ ಸಿ. ರಾಜಶೇಖರ ಅವರನ್ನು ನೇಮಕ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಉಳಿದಂತೆ ಅರಣ್ಯ ಮತ್ತು ಜೀವ ಪರಿಸರ ಇಲಾಖೆಯ ರಾಷ್ಟ್ರೀಯ ಹಾಗೂ ವನ್ಯಜೀವಿ ತಾಣವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ನಿರ್ಧಾರ ತೆಗೆದುಕೊಳ್ಳಲು ಅಗತ್ಯ ಇರುವ ಉಪ ಸಮಿತಿ ರಚಿಸಲು ಮುಖ್ಯಮಂತ್ರಿಯವರಿಗೆ ಸಂಪುಟ ಅಧಿಕಾರ ನೀಡಿದೆ ಎಂದರು.
ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಬೆಂಗಳೂರಿನ ವಾಜಪೇಯಿ ಆರೋಗ್ಯ ಕೇಂದ್ರದಲ್ಲಿ ತೆರೆಯಲು ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಲೋಕೋಪಯೋಗಿ ಯೋಜನೆಗಳ ಅನುಷ್ಠಾನ ಹಾಗೂ ಪರಿವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಫ್ರೋಲಜಿ ಕಟ್ಟಡ ಕಟ್ಟಲು ಹೆಚ್ಚುವರಿ ಪರಿಷ್ಕೃತ ಮೊತ್ತ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂದು ಎಚ್‌.ಕೆ.ಪಾಟೀಲ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement