ಬಹುಮುಖ ವ್ಯಕ್ತಿತ್ವದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ

(ಆಗಸ್ಟ್‌ ೧ರಂದು ಡಾ. ಪ್ರಭಾಕರ ಕೋರೆ ಅವರ ೭೬ ನೇ ಜನ್ಮದಿನವಾಗಿದ್ದು, ಆ ನಿಮಿತ್ತ ಲೇಖನ)
ಜ್ಞಾನ ದೀವಿಗೆ ಇಲ್ಲಿ ಲಕ್ಷಾಂತರ ಮಂದಿಯ ಬಾಳು ಬೆಳಗಿದೆ. ಏಳು ಶಿಕ್ಷಕರಿಂದ ೧೯೧೬ ರಲ್ಲಿ ಆರಂಭವಾದ ಪುಟ್ಟ ಕೆಎಲ್‌ಇ ಸಂಸ್ಥೆ, ಇಂದು ಹೆಮ್ಮರವಾಗಿ ಬೆಳೆದಿದ್ದು, ರಾಷ್ಟ್ರಮಾತ್ರವಲ್ಲ. ವಿದೇಶಗಳ ವಿದ್ಯಾಸಕ್ತರ ಜ್ಞಾನದಾಹ ಇಂಗಿಸುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯ ಶಿಕ್ಷಣ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಕಾನೂನು ತರಬೇತಿ, ವಾಣಿಜ್ಯ ವ್ಯವಹಾರ, ನಿರ್ವಹಣೆ, ಆರೋಗ್ಯ, ಶಿಕ್ಷಣ, ಕೃಷಿ, ಹೋಟೆಲ್ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಇಂದು ಕೆಎಲ್‌ಇ ವಿಸ್ತಾರವಾಗಿ ಹರಡಿಕೊಂಡಿವೆ. ಈ ಯಶಸ್ವಿ ಸಂಸ್ಥೆಯ ರೂವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು ಕೆಎಲ್‌ಇ ಸಂಸ್ಥೆಯ ಕ್ರಿಯಾಶೀಲ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ ಅವರು.
ಸಮಸ್ಯೆಗಳಿಗೆ ಪರಿಹಾರ ಕಾಣುವ ದೃಷ್ಟಿ ; ಸಮಸ್ಯೆಗಳನ್ನು ಬಿಡಿಸುವ ಬೌದ್ಧಿಕ ಪ್ರೌಢಿಮೆ; ಸಮರ್ಪಕ ನಿರ್ಧಾರ ಕೈಗೊಳ್ಳುವ ಕರ್ತೃತ್ವ ಶಕ್ತಿ; ಕಾರ್ಯಶಕ್ತಿ, ವಿಶ್ವಾಸವನ್ನು ಬಿತ್ತಿ ಬೆಳೆಯುವ ಕೌಶಲ್ಯ ಎಲ್ಲಕ್ಕಿಂತ ಹೆಚ್ಚಾಗಿ ಇಡೀ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ- ಈ ಕಾರಣದಿಂದಾಗಿಯೇ ಪ್ರಭಾಕರ ಕೋರೆ ಅವರು ವಿಶಿಷ್ಟ ಶಕ್ತಿಯಾಗಿ ಬೆಳೆದಿದ್ದಾರೆ”- ಎನ್ನುತ್ತಾರೆ ಸಹೃದಯಿಗಳು.
ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿಯಲ್ಲಿ ಆಗಸ್ಟ್‌ ೧, ೧೯೪೭ ರಂದು ಜನಿಸಿದ ಅವರಿಗೆ ಸಮಾಜ ಸೇವೆ ಹಿರಿಯರಿಂದ ಬಂದ ಬಳುವಳಿ. ಸ್ವಾತಂತ್ರ್ಯ ಹೋರಾಟಗಾರರಿದ್ದ ತಂದೆ ಬಸವಪ್ರಭು ಕೋರೆ, ತಾಯಿ ಶಾರದಾದೇವಿ ಇಬ್ಬರೂ ಇದನ್ನೇ ಜೀವನವಾಗಿಸಿಕೊಂಡವರು. ಕೋರೆಯವರು ವಿದ್ಯಾರ್ಥಿ ದೆಸೆಯಿಂದಲೂ ಕ್ರಿಯಾಶೀಲ ಸಂಘಟಕರಾಗಿದ್ದರಲ್ಲದೆ, ೧೯೭೦ ರಲ್ಲಿ ಬಿ.ಕಾಂ. ವಿದ್ಯಾರ್ಥಿ ನಾಯಕರಾಗಿ, ಜಪಾನ ದೇಶದ ಟೋಕಿಯೋದಲ್ಲಿ ನಡೆದಿದ್ದ ಎಕ್ಸ್‌ ಪೋ ೭೦ ರಲ್ಲಿ ಭಾಗವಹಿಸಿದ್ದರು. ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಸಂಸ್ಥಾಪಕರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.

ಮೂರು ಸಲ ರಾಜ್ಯ ಸಭೆ ಹಾಗೂ ಒಂದು ಅವಧಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ರಚನಾತ್ಮಕ ಕಾರ್ಯ ಮಾಡಿದ ಅವರಿಗೆ ‘ಪ್ರಭಾಂಕಲಿ’ ಮತ್ತು ‘ಸ್ಪಂದನ’, ಅನನ್ಯ ಸಾಧಕ ಮುಂತಾದ ಅಭಿನಂದನಾ ಗ್ರಂಥಗಳನ್ನು ಸಮರ್ಪಿಸಲಾಗಿದೆ. ಉತ್ತರಾಯಣ ಕನ್ನಡ ಮತ್ತು ಇಂಗ್ಲಿಷ್‌ ಕೃತಿಗಳ ಮೂಲಕ ಸಾಹಿತ್ಯ-ಸಂಸ್ಕೃತಿಯನ್ನು ಶ್ರೀಮಂತಗೋಳಿಸಿದ್ದಾರೆ. ಖ್ಯಾತ ಇಂಗ್ಲಿಷ್‌ ಬರಹಗಾರ್ತಿ ರಶ್ಮಿ ಬನ್ಸಾಲ ಅವರು ದಿ ಏಡ್ತ್ ರಿಷಿ (ಖಿhe ಇighಣh ಖishi) ಗ್ರಂಥ ೨೦೧೬ರಲ್ಲಿ ಪ್ರಕಟವಾಗಿದೆ. ಡಾ.ಸತೀಶ.ಕೆ.ಪಾಟೀಲ ಅವರು ಹಂಪಿ ವಿಶ್ವವಿದ್ಯಾಲಯದಿಂದ “ಡಾ. ಪ್ರಭಾಕರ ಕೋರೆ ಅವರ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಗಳು ಕುರಿತು ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.
ಅವರಿಗೆ ಶಿಕ್ಷಣದ ಜತೆ ಜತೆಗೆ ಸಾಹಿತ್ಯ-ಸಂಸ್ಕೃತಿಯಲ್ಲೂ ಸಹಕಾರ ಕ್ಷೇತ್ರದಲ್ಲೂ ವಿಶೇಷ ಆಸಕ್ತಿ. ಸಹಕಾರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದವರಿಗೆ ಗೌರವ ಸಮರ್ಪಿಸುವುದು ಇವರ ಸಂಪ್ರದಾಯ. ಜೈಂಟ್ಸ್ ಇಂಟರ್‌ನ್ಯಾಷನಲ್ ಅಂತರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿಗಳು ಅವರನ್ನು ಅರಿಸಿಕೊಂಡು ಬಂದಿವೆ. ಭಾರತ ಸರ್ಕಾರದ ಮಾನ್ಯತೆ ಪಡೆದ ಭಾರತೀಯ ಸಕ್ಕರೆ ತಂತ್ರಜ್ಞರ ಒಕ್ಕೂಟದ ಜೀವನಮಾನ ಸಾಧನೆ, “ದಿ ಡೋಯನ್ಸ್-ಗಾರ್ಡಯನ್ಸ್ ಆಫ್ ನಾಲೆಜ್‌, ಅಮೆರಿಕದ ನ್ಯೂಯಾರ್ಕ್‌ ರೋಟರಿ ಕ್ಲಬ್‌ದ ಗಿಫ್ಟ್‌ ಲೈಫ್‌ ಪೌಂಢೇಶನ್‌ನ ‘ಎಂಜಿಲ್, ಸಿರಿಕನ್ನಡ ಗೌರವ, ಶ್ರೀ ಮೃತ್ಯುಂಜಯ ಮಹಾಂತ, ವಿಶ್ವ ಚೇತನ, ಶ್ರೇಷ್ಠ ಶಿಕ್ಷಣ ತಜ್ಞ ಮುಂತಾದ ಪ್ರಶಸ್ತಿಗಳು ಸಂದಿವೆ. ರಾಜ್ಯ ಸಭಾ ಸದಸ್ಯರಾಗಿದ್ದ ಅವರು ರಕ್ಷಣಾ, ಗೃಹ ಮಂಡಳಿ, ಟೆಲಿಕಾಂ, ಆರೋಗ್ಯ, ರೈಲ್ವೆ ಇಲಾಖೆ, ಸ್ಥಾಯಿ ಯೋಜನಾ ಮತ್ತು ವಾಸ್ತುಶಿಲ್ಷ ಶಾಲೆಯ ಸಾಮಾನ್ಯ ಪರಿಷತ್ತು, ಹಿಂದಿ ಪ್ರಚಾರ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮುಂತಾದ ಸಮಿತಿಗಳ ಸದಸ್ಯರಾಗಿ ವಿಶಿಷ್ಟ ಮತ್ತು ಅನುಪಮ ಸೇವೆ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

೧೯೮೪ ರಿಂದ ಕೆಎಲ್‌ಇ ಸಂಸ್ಥೆಯ ಆಡಳಿತ ಕರ್ಣಧಾರತ್ವವನ್ನು ಚಿಕ್ಕ ವಯಸ್ಸಿನಲ್ಲಿ ವಹಿಸಿಕೊಂಡು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅವರು ಅಧಿಕಾರ ವಹಿಸಿಕೊಂಡಾಗ ಕೆಎಲ್‌ಇ ಸಂಸ್ಥೆಯ ೩೪ ಸಂಸ್ಥೆಗಳು ಇದ್ದವು. ಇಂದು ೨೯೫ಕ್ಕೂ ಹೆಚ್ಚಿನ ಸಂಸ್ಥೆಗಳನ್ನು, ೧೮,೦೦೦ ಸಿಬ್ಬಂದಿಗಳು, ೧,೩೫,೦೦೦ ವಿದ್ಯಾರ್ಥಿಗಳನ್ನು ಹೊಂದಿದೆ. ಜಾಗತಿಕ ಮಟ್ಟದ ವಿವಿಧ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಹೊಂದಿರುವ ಸಂಸ್ಥೆಗೆ ಗುಣಮಟ್ಟದ ಶಿಕ್ಷಣವೇ ಯಶಸ್ಸಿನ ಮಂತ್ರ. ಈ ಕಾರಣದಿಂದಾಗಿಯೇ ಸ್ವಾಯತ್ವ ವಿಶ್ವವಿದ್ಯಾಲಯ ಎಂಬ ಗೌರವ ಸಿಕ್ಕಿದೆ.
ಕೈಗೆಟಕುವ ವೆಚ್ಚದಲ್ಲಿ ಅತ್ಯಾಧುನಿಕ ಆರೋಗ್ಯಸೇವೆ ಜನಸಾಮಾನ್ಯರಿಗೂ ಕೈಗೆಟುಕಬೇಕು ಎನ್ನುವುದು ಇವರ ಇನ್ನೊಂದು ಕನಸು. ಇದನ್ನು ನನಸಾಗಿಸುವ ಪ್ರಯತ್ನವಾಗಿ ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನೂರಾರು ಕೋಟಿಗೂ ಹೆಚ್ಚಿನ ಹಣ ವಿನಿಯೋಗಿಸಿ ೪ ಸಾವಿರ ಹಾಸಿಗೆಯ ಹೈಟೆಕ್ ಆಸ್ಪತ್ರೆ ನಿರ್ಮಿಸಿ, ಜನಮೆಚ್ಚುಗೆ ಪಡೆದಿದ್ದಾರೆ. ಉಚಿತ ವೈದ್ಯಕೀಯ ಸೇವೆ ಒದಗಿಸಿ ಲಕ್ಷಾಂತರ ಮಂದಿಗೆ ಆರೋಗ್ಯ ಭಾಗ್ಯ ಕಲ್ಪಿಸಿ ಕೊಟ್ಟಿದ್ದಾರೆ. ರಾಜ್ಯದ ವಿಧಾನ ಮಂಡಲ ಅಧಿವೇಶನ ಬೆಳಗಾವಿಯಲ್ಲಿ ಯಶಸ್ವಿಯಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹುಬ್ಬಳ್ಳಿಯ ಗೋಕಲ ರಸ್ತೆಯ ಸುಚಿರಾಯು ಮತ್ತು ಕೊಯಿನ್ ರಸ್ತೆಯ ಕೊ-ಆಪ್‌ರೇಟಿವ್ ಆಸ್ಪತ್ರೆಯ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದಾರೆ. ೨೦೨೧-೨೨ ರಿಂದ ಅತ್ಯಾಧುನಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯನ್ನು ಅಣಿಗೊಳಿಸುತ್ತಿದ್ದಾರೆ.

ಕೆಎಲ್‌ಇ ಸಂಸ್ಥೆಯ ಪ್ರಸಾರಾಂಗದ ಮೂಲಕ ೧೧೫ ಕ್ಕೂ ಹೆಚ್ಚಿನ ಗ್ರಂಥಗಳನ್ನು ಪ್ರಕಟಿಸಿದ್ದಾರೆ, ಅಲ್ಲದೆ, ಕೆಎಲ್‌ಇ ವಾರ್ತಾ ಪತ್ರ ತ್ರೈಮಾಸಿಕವನ್ನು ೨೦೦೧ ರಿಂದ ಪ್ರಕಟಿಸುತ್ತಿದ್ದಾರೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಕೆಎಲ್‌ಇ ಎಫ್.ಎಂ ಬಾನುಲಿ ಕೇಂದ್ರಗಳನ್ನು ಸ್ಥಾಪಿಸಿ, ಸಮುದಾಯದ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಮತ್ತು ನಿಕಟ ಸಂಪರ್ಕ ಹೊಂದಿರುವುದು ಅವರದ್ದು ಇನ್ನೊಂದು ವೈಶಿಷ್ಟ್ಯ. ಎರಡನೇ ವಿಶ್ವ ಕನ್ನಡ ಸಮ್ಮೇಳನ, ಅಖಿಲ ಭಾರತ ಕನ್ನಡ ಸಮ್ಮೇಳನ ಮತ್ತು ಶರಣ ಸಮ್ಮೇಳನ ಮುಂತಾದವುಗಳನ್ನು ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಆಯೋಜಿಸುತ್ತಾ ಬಂದಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕರು, ಅಜೀವ ಸದಸ್ಯರು ಡಾ. ಕೋರೆ ಅವರ ದೂರದೃಷ್ಟಿತ್ವ ಮತ್ತು ಯೋಜನೆಗಳಿಂದಾಗಿ ಕೆಎಲ್‌ಇ ಸಂಸ್ಥೆ ಪ್ರಗತಿಪರ ಕಾರ್ಯಗಳನ್ನು ಮಾಡುತ್ತಿವೆ ಎಂದು ಹೇಳುತ್ತಾರೆ.
ಶಿಸ್ತು, ಪಾದರಸದಂಥ ವ್ಯಕ್ತಿತ್ವ, ಸಮಯೋಚಿತ ನಿರ್ಣಯ ಕೈಗೊಂಡು, ತ್ವರಿತ ಕಾರ್ಯಚಾರಣೆಗಳು ಕೋರೆ ಅವರ ಯಶಸ್ಸಿನ ಸೂತ್ರಗಳಾಗಿವೆ. ಜ್ಞಾನದಾಸೋಹ ಜೊತೆಗೆ ಗಡಿಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವ ವಿಧೇಯಕ ಕಾರ್ಯದಲ್ಲೂ ಸಕ್ರಿಯವಾಗಿ ಡಾ. ಪ್ರಭಾಕರ ಕೋರೆ ತೊಡಿಗಿಸಿಕೊಂಡಿದ್ದಾರೆ. “ಸಂಸ್ಥೆಯನ್ನು ಸ್ಥಾಪಿಸಿದ ಸಪ್ತರ್ಷಿಗಳ ಆಶೀರ್ವಾದ, ದಾನಿಗಳ ನೆರವು, ಆಡಳಿತ ಮಂಡಳಿಯ ಕ್ರಿಯಾಶೀಲತೆ, ಸಿಬ್ಬಂದಿಗಳು ಸೇವೆ, ಕರ್ತವ್ಯ ನಿಷ್ಠೆ, ಕಾರ್ಯತತ್ಪರತೆಯೇ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಗೆ ಕಾರಣ” ಎಂದು ಸೌಜನ್ಯದಿಂದಲೇ ನುಡಿಯುತ್ತಾರೆ.
ಸಪ್ತ ಋಷಿಗಳು ಕೆಎಲ್‌ಇ ಸಂಸ್ಥೆಯನ್ನು ಕಟ್ಟಿದರೆ, ಡಾ. ಪ್ರಭಾಕರ ಕೋರೆ ಅವರು ತಮ್ಮ ಎಲ್ಲ ನಿರ್ದೇಶಕರ ಮತ್ತು ಸಿಬ್ಬಂದಿಗಳ ಪ್ರೀತಿ, ವಿಶ್ವಾಸ ಗಳಿಸಿ, ಸಂಸ್ಥೆಗಳನ್ನು ಬೆಳಿಸಿದ್ದಾರೆ ಎನ್ನುತ್ತಾರೆ ಹಿರಿಯರು. ಕೋರೆ ಅವರು ಪತ್ನಿ ಶ್ರೀಮತಿ ಆಶಾ, ಮಕ್ಕಳಾದ ಪ್ರೀತಿ, ಅಮಿತ್, ದೀಪ್ತಿ, ಮೊಮ್ಮಕ್ಕಳು,‌ ಸ್ನೇಹಿತರು, ಬಂಧುಗಳು, ಹಿತೈಷಿಗಳು ನೀಡುತ್ತಿರುವ ಸಹಕಾರವನ್ನು ಸದಾ ಸ್ಮರಿಸುತ್ತಾರೆ. ಪ್ರವಾಸ ಮತ್ತು ಸಂಗೀತ ಪ್ರೀಯರಾಗಿರುವ ಅವರು ದೇಶ, ವಿದೇಶಗಳಲ್ಲಿ ದೊರೆಯುತ್ತಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಸಂಸ್ಥೆಯ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಚಿನ್ನ ಕಳ್ಳಸಾಗಣೆ ಪ್ರಕರಣ : ರನ್ಯಾ ರಾವ್‌ ಗೆ ಸೇರಿದ 34 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ

ಕೆಎಲ್‌ಇ ಸಂಸ್ಥೆ ಸಾರಥ್ಯವನ್ನು ಅಖಂಡ ೪೦ ವರ್ಷಗಳ ಕಾಲ ಸಮರ್ಥವಾಗಿ ನಿಭಾಯಿಸುತ್ತಿರುವ ಡಾ. ಪ್ರಭಾಕರ ಕೋರೆ ಹತ್ತಾರು ಸಾಧನೆಗಳ ಗರಿ ಮೂಡಿಸಿಕೊಂಡಿರುವ ಅನನ್ಯ ಸಾಧನ ಎನ್ನುತ್ತಾರೆ ಕೆಎಲ್‌ಇ ಸಂಸ್ಥೆಯ ವಾರ್ತಾ ಪತ್ರಿಕೆಯ ಗೌರವ ಸಂಪಾದಕರಾದ ನಿವೃತ್ತ ಪ್ರಾಚಾರ್ಯರಾದ ಬಿ.ಎಸ್. ಗವಿಮಠ ಅವರು.
ಕೆಎಲ್‌ಇ ಸಂಸ್ಥೆಯ ಲಾಂಛನದಲ್ಲಿರುವ ಸತ್ಯ, ಪ್ರೇಮ, ಸೇವೆ , ಸ್ವಾರ್ಥ, ತ್ಯಾಗ ನುಡಿಗಳನ್ನು ತಾವು ಅಳವಡಿಸಿಕೊಂಡು, ಸಿಬ್ಬಂದಿಗಳಲ್ಲಿ ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು ಮತ್ತು ಅಜೀವ ಸದಸ್ಯರನ್ನು ಸದಾ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುತ್ತಾರೆ ಸಂಸ್ಥೆಯ ನಿವೃತ್ತ ಪ್ರಾಚಾರ್ಯರು ಮತ್ತು ಅಜೀವ ಸದಸ್ಯರಾದ ಪ್ರೊ. ಆರ್. ನಟರಾಜ ಅವರು.
ಡಾ. ಪ್ರಭಾಕರ ಕೋರೆ ಅವರ ೭೬ನೇ ಜನ್ಮ ದಿನದ ಸವಿ ನೆನಪಿಗಾಗಿ ವಿವಿಧ ಸಂಸ್ಥೆಗಳಲ್ಲಿ, ಊರುಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಸ್ವಚ್ಛತಾ ಅಭಿಯಾನ, ರಕ್ತದಾನ, ಪರಿಸರ ಸಂರಕ್ಷಣೆ, ರೈತರಿಗೆ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವ ತಜ್ಞರ ಉಪನ್ಯಾಸಗಳನ್ನು, ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಅಶುಭಾಷಣ, ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯವಾದ ಪುಸ್ತಕಗಳನ್ನು, ನೋಟಬುಕ್‌ಗಳನ್ನು, ಮುಂತಾದ ವಿಧಾಯಕ ಕಾರ್ಯಗಳನ್ನು ಸಿಬ್ಬಂದಿಗಳು ಒಂದು ವಾರ ಕಾಲ ಅಯೋಜಿಸಿದ್ದಾರೆ. ಶಿಕ್ಷಣ, ಆರೋಗ್ಯ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೋರೆ ಅವರಿಂದ ಇನ್ನೂ ಹೆಚ್ಚಿನ ಕಾರ್ಯಗಳು ನಡೆಯಲಿ ಎಂಬುದು ಎಲ್ಲರ ಸದಾಶಯ.
-ಬಿ.ಎಸ್.ಮಾಳವಾಡ, ನಿವೃತ್ತ ಗ್ರಂಥಪಾಲಕರು

 

4 / 5. 12

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement