ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ ವಿಚಾರ: ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು : ತಿರುಪತಿ ಲಡ್ಡು ತಯಾರಿಕೆಗೆ ಕರ್ನಾಟಕದ ನಂದಿನಿ ತುಪ್ಪ ಸರಬರಾಜು ಸ್ಥಗಿತ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಚುನಾವಣೆಯಲ್ಲಿ ಕೆಎಂಎಫ್‌ ಬಗ್ಗೆ ಕಾಂಗ್ರೆಸ್ ರಾಜಕಾರಣ ಮಾಡಿತು. ಅಮುಲ್ ವಿಷಯ ಇಟ್ಟುಕೊಂಡು ರಾಜಕೀಯ ಮಾಡಿತು. ಈಗ ಕಾಂಗ್ರೆಸ್ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಹಳೇ ದರದಲ್ಲಿ ತಿರುಪತಿಗೆ ನಂದಿನಿ ತುಪ್ಪ ಕೊಡುತ್ತಿಲ್ಲ. ನಂದಿನಿಗೆ ರಾಜಕೀಯ ಸ್ಪರ್ಶ ನೀಡಿದ ಪರಿಣಾಮ ಕೇರಳ ಮಾರುಕಟ್ಟೆಯನ್ನು ನಂದಿನಿ ಈಗಾಗಲೇ ಕಳೆದುಕೊಂಡಿದೆ. ಇದೀಗ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.
ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರಕ್ಕೆ ಬಂದಾಗ ಲಾಭ-ನಷ್ಟದ ಲೆಕ್ಕ ಹೇಳುವ ಕಾಂಗ್ರೆಸ್‌ ಇದೇ ಸೂತ್ರವನ್ನು ಇತರ ಧರ್ಮಗಳಿಗೆ ಅನ್ವಯಿಸಲು ಒಪ್ಪುವುದಿಲ್ಲ. ಹಿಂದೂಗಳೆಡೆಗೆ ತಾತ್ಸಾರ ಮಾಡುವುದು ತಮ್ಮ ಜಾತ್ಯಾತೀತ ಸೂತ್ರ ಎಂಬುದನ್ನು ಅವರು ಈಗ ಮತ್ತೆ ರುಜುವಾತು ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಎಂಎಫ್ ಮಾಜಿ ಅಧ್ಯಕ್ಷ ಸೋಮಶೇಖರ ರೆಡ್ಡಿ, ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ನಂದಿನಿ ತುಪ್ಪ ಕಳಿಸಬೇಕು. ತಿರುಪತಿಗೆ ಹಾಗೂ ನಂದಿನಿ ತುಪ್ಪಕ್ಕೆ ಅವಿನಾಭಾವ ಸಂಬಂಧವಿದೆ. ಅಷ್ಟೇ ಅಲ್ಲದೇ ನಂದಿನಿಯ ಅಂತರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಗೆ ಸಮಸ್ಯೆಯಾಗಲಿದೆ. ದಯವಿಟ್ಟು ಕೆಎಂಎಫ್‌ ಈ ಟೆಂಡರ್‌ ಅನ್ನು ಬಿಡಬಾರದು. ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು: ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ; ಮೂವರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement