ನವದೆಹಲಿ: ಪಕ್ಷದ ದಿಗ್ಗಜ ನಾಯಕಿಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸೇರಿದಂತೆ ಹಲವು ಯುವ ಮುಖಗಳನ್ನು ಹೊಂದಿರುವ ದೆಹಲಿ ಬಿಜೆಪಿ ಪದಾಧಿಕಾರಿಗಳ ಹೊಸ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಹರ್ಷ್ ಮಲ್ಹೋತ್ರಾ, ಯೋಗೇಂದ್ರ ಚಂದೋಲಿಯಾ ಮತ್ತು ಕಮಲ್ಜೀತ್ ಸೆಹ್ರಾವತ್ ಅವರನ್ನು ಹೊಸದಾಗಿ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಘೋಷಿಸಿರುವ ತಂಡದಲ್ಲಿ ಹಲವು ಮಹಿಳಾ ಪದಾಧಿಕಾರಿಗಳೂ ಇದ್ದಾರೆ.
ಎಂಟು ಕಾರ್ಯದರ್ಶಿಗಳಲ್ಲಿ ಬಾನ್ಸುರಿ ಸ್ವರಾಜ್, ದೆಹಲಿಯ ಮಾಜಿ ಮುಖ್ಯಮಂತ್ರಿ ಮದನಲಾನ ಖುರಾನಾ ಅವರ ಪುತ್ರ ಹರೀಶ ಖುರಾನಾ ಮತ್ತು ಇಂಪ್ರಿತ್ ಸಿಂಗ್ ಬಕ್ಷಿ ಸೇರಿದ್ದಾರೆ. ಬಾನ್ಸುರಿ ಸ್ವರಾಜ್ ಅವರು ಇತ್ತೀಚೆಗೆ ದೆಹಲಿ ಬಿಜೆಪಿಯ ಕಾನೂನು ಘಟಕದ ಸಹ ಸಂಚಾಲಕರಾಗಿ ನೇಮಕಗೊಳ್ಳುವುದರೊಂದಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಭಾರತದ ಮಾಜಿ ವಿದೇಶಾಂಗ ಸಚಿವೆ ಮತ್ತು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಆಗಸ್ಟ್ 2019 ರಲ್ಲಿ ತಮ್ಮ 67 ನೇ ವಯಸ್ಸಿನಲ್ಲಿ ನಿಧನರಾದರು.
ಹೊಸದಾಗಿ ನೇಮಕಗೊಂಡ ಎಂಟು ಉಪಾಧ್ಯಕ್ಷರಲ್ಲಿ ವಿಷ್ಣು ಮಿತ್ತಲ್, ದಿನೇಶ ಪ್ರತಾಪ ಸಿಂಗ್, ಮಾಜಿ ಮೇಯರ್ ಲತಾ ಗುಪ್ತಾ ಮತ್ತು ಮಾಜಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯೋಗಿತಾ ಸಿಂಗ್ ಸೇರಿದ್ದಾರೆ.
ಸತೀಶ ಗಾರ್ಗ್ ಅವರನ್ನು ಪಕ್ಷದ ನೂತನ ಖಜಾಂಚಿಯನ್ನಾಗಿ ಮಾಡಲಾಗಿದೆ. ಲಕ್ಷ್ಮಿನಗರ ಶಾಸಕ ಅಭಯ ವರ್ಮಾ ದೆಹಲಿ ಬಿಜೆಪಿಯ ಮುಖ್ಯ ವಕ್ತಾರ ಹುದ್ದೆಯನ್ನು ಉಳಿಸಿಕೊಂಡಿದ್ದಾರೆ. ಮಾಧ್ಯಮ ವಿಭಾಗದ ಮುಖ್ಯಸ್ಥರ ಪ್ರಮುಖ ಹುದ್ದೆಯನ್ನು ಪ್ರವೀಣ ಶಂಕರ ಕಪೂರ್ ಅವರಿಗೆ ನೀಡಲಾಗಿದೆ. ವಿಕ್ರಂ ಮಿತ್ತಲ್ ಮಾಧ್ಯಮ ಸಂವಹನ ನಿರ್ವಹಿಸಲಿದ್ದಾರೆ.
ದೆಹಲಿ ಬಿಜೆಪಿಯ ಹೊಸದಾಗಿ ನೇಮಕಗೊಂಡ 11 ವಕ್ತಾರರಲ್ಲಿ ಶಿಖಾ ರೈ, ವೀರೇಂದ್ರ ಬಬ್ಬರ್, ವಿಕ್ರಂ ಬಿಧುರಿ, ಶುಭೇಂದು ಶೇಖರ ಅವಸ್ತಿ, ಅಜಯ ಸೆಹ್ರಾವತ್ ಮತ್ತು ಪ್ರೀತಿ ಅಗರ್ವಾಲ್ ಸೇರಿದ್ದಾರೆ.
ರೀಚಾ ಪಾಂಡೆ ಮಿಶ್ರಾ ದೆಹಲಿ ಬಿಜೆಪಿಯ ಮಹಿಳಾ ಮೋರ್ಚಾದ ಮುಖ್ಯಸ್ಥರಾಗಲಿದ್ದಾರೆ. ಶಶಿ ಯಾದವ್ ಅವರನ್ನು ದೆಹಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪಕ್ಷದ ಯುವ ನಾಯಕ ನಿಖತ್ ಅಬ್ಬಾಸ್ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ದೆಹಲಿ ಬಿಜೆಪಿಯ ಹಿಂದಿನ ತಂಡದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ನೀರಜ ತಿವಾರಿ ಅವರಿಗೆ ಪೂರ್ವಾಂಚಲ್ ಮೋರ್ಚಾ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.
ಯುವ ಮೋರ್ಚಾದ ಮಾಜಿ ಅಧ್ಯಕ್ಷ ಸುನೀಲ್ ಯಾದವ್ ಒಬಿಸಿ ಮೋರ್ಚಾದ ನೂತನ ಅಧ್ಯಕ್ಷರಾಗಲಿದ್ದಾರೆ ಮತ್ತು ಮೋಹನ್ ಲಾಲ್ ಗಿಹಾರಾ ಅವರು ಎಸ್‌ಸಿ ಮೋರ್ಚಾದ ಮುಖ್ಯಸ್ಥರಾಗಿರುತ್ತಾರೆ ಎಂದು ದೆಹಲಿ ಬಿಜೆಪಿ ಬಿಡುಗಡೆ ಮಾಡಿದ ಪದಾಧಿಕಾರಿಗಳ ಪಟ್ಟಿ ತಿಳಿಸಿದೆ.
ವಿಜೇಂದರ ಧಾಮ (ಮಯೂರ್ ವಿಹಾರ್), ಮನೋಜ್ ತ್ಯಾಗಿ (ನವೀನ್ ಶಹದಾರ), ಪೂನಂ ಚೌಹಾಣ (ಈಶಾನ್ಯ ದೆಹಲಿ), ರಾಜಕುಮಾರ ಗ್ರೋವರ್ (ಪಶ್ಚಿಮ ದೆಹಲಿ) ಮತ್ತು ರಾಜಕುಮಾರ ಚೌತಾಲ (ದಕ್ಷಿಣ ದೆಹಲಿ) ಸೇರಿದಂತೆ ದೆಹಲಿಯ 14 ಜಿಲ್ಲಾ ಘಟಕಗಳ ಹೊಸ ಅಧ್ಯಕ್ಷರ ಹೆಸರನ್ನು ದೆಹಲಿ ಬಿಜೆಪಿ ಅಧ್ಯಕ್ಷರು ಘೋಷಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ