ನವದೆಹಲಿ: ರಾಜ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ರಕ್ಷಿಸಲು ಪೊಲೀಸರಿಂದ ಸಾಧ್ಯವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಬುಧವಾರ ಹೇಳಿದ್ದಾರೆ. ಮತ್ತು ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಹರ್ಯಾಣ ಸೋಮವಾರದಿಂದ ಆರು ಜೀವಗಳ ಸಾವಿಗೆ ಕಾರಣವಾದ ಕೋಮು ಘರ್ಷಣೆಗೆ ಸಾಕ್ಷಿಯಾಗಿದೆ. ಹಿಂಸಾಚಾರ ಇದೀಗ ರಾಷ್ಟ್ರ ರಾಜಧಾನಿಯ ಹೆಬ್ಬಾಗಿಲು ವರೆಗೂ ತಲುಪಿದೆ.
ಸೌಹಾರ್ದತೆ ಇಲ್ಲದಿದ್ದರೆ ಭದ್ರತೆ ಇಲ್ಲ. ಎಲ್ಲರೂ ಒಬ್ಬರನ್ನೊಬ್ಬರು ವಿರೋಧಿಸುವ ಹಠ ಹಿಡಿದರೆ ಭದ್ರತೆ ಇಲ್ಲ. ಪ್ರತಿಯೊಬ್ಬರನ್ನು ರಕ್ಷಿಸಲು ಪೊಲೀಸರಿಂದಾಗಲಿ, ಸೇನೆಯಿಂದಾಗಲಿ ಅಥವಾ ನಿಮ್ಮಿಂದಾಗಲಿ ನನ್ನಿಂದಾಗಲಿ ಸಾಧ್ಯವಿಲ್ಲ ಎಂದರು.
ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಒಂದು ನಿರ್ದಿಷ್ಟ ವಾತಾವರಣ ಬೇಕು. ಸೌಹಾರ್ದತೆ, ಉತ್ತಮ ಬಾಂಧವ್ಯ ಇರಬೇಕು… ಅದಕ್ಕಾಗಿ ನಮ್ಮಲ್ಲಿ ಶಾಂತಿ ಸಮಿತಿಗಳಿವೆ… ತೊಂದರೆಯಾದರೆ ನಾವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಜಗತ್ತಿನಲ್ಲಿ ಎಲ್ಲಿಗೆ ಹೋದರೂ ಪೊಲೀಸರಿಂದ ಎಲ್ಲರನ್ನೂ ರಕ್ಷಿಸಲು ಸಾಧ್ಯವಿಲ್ಲ, ಎರಡು ಲಕ್ಷ ಜನರಿದ್ದಾರೆ ಮತ್ತು ಕೇವಲ 50,000 ಪೊಲೀಸರಿದ್ದಾರೆ” ಎಂದು ಅವರು ಹೇಳಿದರು.
ಕೋಮು ಘರ್ಷಣೆಗೆ ಕಾರಣವಾದ ಮೋನು ಮಾನೇಸರ್ ಬಗ್ಗೆ ರಾಜ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಖಟ್ಟರ್ ಹೇಳಿದರು. ಆತನ ವಿರುದ್ಧ ಪ್ರಕರಣವನ್ನು ರಾಜಸ್ಥಾನ ಸರ್ಕಾರ ದಾಖಲಿಸಿದೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಆತನನ್ನು ಪತ್ತೆಹಚ್ಚಲು ಸಹಾಯ ಬೇಕಾದರೆ ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ನಾನು ರಾಜಸ್ಥಾನ ಸರ್ಕಾರಕ್ಕೆ ಹೇಳಿದ್ದೇನೆ. ಈಗ ರಾಜಸ್ಥಾನ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಆತ ಎಲ್ಲಿದ್ದಾನೆಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಫೆಬ್ರವರಿಯಿಂದ ರಾಜಸ್ಥಾನದ ಜೋಧ್‌ಪುರದ ಇಬ್ಬರು ವ್ಯಕ್ತಿಗಳ ಕೊಲೆಗೆ ಬೇಕಾಗಿದ್ದ ಮೋನು ಮಾನೇಸರ್ ಪರಾರಿಯಾಗಿದ್ದಾನೆ. ಆದರೆ ಆತ ಆಕ್ಷೇಪಾರ್ಹ ವಿಡಿಯೋವನ್ನು ಪ್ರಸಾರ ಮಾಡಿ ಕೆಲವರನ್ನು ಕೆರಳಿಸಿದ್ದರು ಎನ್ನಲಾಗಿದೆ.
ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ ಆತ ಕಾಣಿಸಿಕೊಂಡಿದ್ದ ಎಂಬ ವದಂತಿಗಳು ಘರ್ಷಣೆಗೆ ಕಾರಣವಾಗಿವೆ. ಕೆಲವರು ವಿಶ್ವ ಹಿಂದು ಪರಿಷತ್ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ವಿಷಯ ಅಲ್ಲಿಂದ ತಾರಕಕ್ಕೇರಿತು. ಮಧ್ಯರಾತ್ರಿಯ ನಂತರ ಮಸೀದಿಗೆ ಬೆಂಕಿ ಹಚ್ಚಲಾಯಿತು, ನೂರಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಯಿತು.
ಸೋಮವಾರದ ಘರ್ಷಣೆಯ ಅಲೆಗಳು ದೆಹಲಿಯ ಪಕ್ಕದಲ್ಲಿರುವ ಗುರುಗ್ರಾಮದ ವರೆಗೆ ತಲುಪಿದ್ದು, ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಗುರುಗ್ರಾಮದಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಆದರೆ ನಿನ್ನೆ 200 ಜನರ ಗುಂಪೊಂದು ನಿಯಮ ಉಲ್ಲಂಘಿಸಿ ರೆಸಿಡೆನ್ಶಿಯಲ್ ಸೊಸೈಟಿ ಬಳಿಯಿದ್ದ ಹೋಟೆಲ್‌ಗೆ ಬೆಂಕಿ ಹಚ್ಚಿದ ನಂತರ ಅದು ಸುಟ್ಟು ಕರಕಲಾಗಿದೆ. ಬೆಂಕಿ ಹಚ್ಚುವ ಘಟನೆಗಳನ್ನು ತಡೆಯಲು ಪೆಟ್ರೋಲ್ ಅಥವಾ ಡೀಸೆಲ್ ಅನ್ನು ವಾಹನಗಳ ಹೊರಗೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, 116 ಜನರನ್ನು ಬಂಧಿಸಲಾಗಿದೆ ಮತ್ತು 190 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಖಟ್ಟರ್ ಹೇಳಿದರು. “ಹಿಂಸಾಚಾರಕ್ಕೆ ಕಾರಣರಾದವರನ್ನು ಹಾನಿಗೆ ಹೊಣೆಗಾರರನ್ನಾಗಿ ಮಾಡಲಾಗುವುದು… ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ಫೋನ್ ಕರೆ ದಾಖಲೆಗಳನ್ನು ತನಿಖೆ ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ