ಶಿವಮೊಗ್ಗ: ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ವಿದ್ಯುತ್ ಆಘಾತಕ್ಕೆ ಒಳಗಾಗಿ ಅದರಲ್ಲಿದ್ದ ಪ್ರಯಾಣಿಕರು ಅಸ್ವಸ್ಥರಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಗೆಣಸಿನಕುಣಿ ಸಮೀಪ ನಡೆದಿದೆ ಎಂದು ಬುಧವಾರ ವರದಿಯಾಗಿದೆ.
ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕೂಡಲೇ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದಿದೆ. ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಬಸ್ ಮೇಲೆ ಬಿದ್ದಿದ್ದರಿಂದ ಬಸ್ ಒಳಗಿದ್ದ 35 ಪ್ರಯಾಣಿಕರ ದೇಹದಲ್ಲಿ ವಿದ್ಯುತ್ ಪ್ರವಹಿಸಿ ಅವರು ಅಸ್ವಸ್ಥಗೊಳ್ಳುವಂತಾಯಿತು. ಬಸ್ ಮೇಲೆ ವಿದ್ಯುತ್ ತಂತಿ ಬಿದ್ದ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಅಸ್ವಸ್ಥ ಪ್ರಯಾಣಿಕರನ್ನು ಕೂಡಲೇ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿದ್ದರು ಎನ್ನಲಾಗಿದೆ. ಈ ಪೈಕಿ ತೀವ್ರ ಅಸ್ವಸ್ಥರಾಗಿರುವ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ. ಸಾಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ