ಬಿಗಿ ಭದ್ರತೆಯ ನಡುವೆ ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೆ ಆರಂಭಿಸಿದ ಎಎಸ್‌ಐ

ವಾರಾಣಸಿ: ಶುಕ್ರವಾರ ಬೆಳಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡವು ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣಕ್ಕೆ ಆಗಮಿಸಿದ್ದು, ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ ಸುಮಾರು 7 ಗಂಟೆಗೆ ಸಂಕೀರ್ಣದ ವೈಜ್ಞಾನಿಕ ಸರ್ವೆ ಪ್ರಾರಂಭವಾಯಿತು.
ಮಧ್ಯಾಹ್ನ 12 ಗಂಟೆಯವರೆಗೆ ಸಮೀಕ್ಷೆ ನಡೆಯಲಿದ್ದು, ಇಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮತ್ತೆ ಸರ್ವೆ ನಡೆಯಲಿದೆ. 17 ನೇ ಶತಮಾನದ ಮಸೀದಿಯನ್ನು ಈ ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸುವ ಉದ್ದೇಶ ಹೊಂದಿರುವ ಸಮೀಕ್ಷೆಯನ್ನು ನಡೆಸಲು ಅಲಹಾಬಾದ್ ಹೈಕೋರ್ಟ್ ಗುರುವಾರ ಎಎಸ್‌ಐ(ASI)ಗೆ ಅನುಮತಿ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ. ಎಎಸ್‌ಐ ಸಮೀಕ್ಷೆ ಆರಂಭವಾದಾಗ ಜಿಲ್ಲಾಡಳಿತದಿಂದ ನೇಮಕಗೊಂಡವರು ಮಾತ್ರ ಆವರಣದಲ್ಲಿ ಹಾಜರಿದ್ದರು.
ಇದೇ ವೇಳೆ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ ಸದಸ್ಯರು ಸಮೀಕ್ಷೆಯನ್ನು ಬಹಿಷ್ಕರಿಸಿದ್ದಾರೆ ಎಂದು ವರದಿಯಾಗಿದೆ. ಗುರುವಾರ, ಅಲಹಾಬಾದ್ ಹೈಕೋರ್ಟ್ ವಾರಣಾಸಿ ಜಿಲ್ಲಾ ನ್ಯಾಯಾಲಯದ ಸಮೀಕ್ಷೆ ನಡೆಸುವ ಆದೇಶವನ್ನು ಎತ್ತಿಹಿಡಿದಿದೆ ಮತ್ತು ಉದ್ದೇಶಿತ ಕ್ರಮವು “ನ್ಯಾಯದ ಹಿತಾಸಕ್ತಿಯಲ್ಲಿ ಅಗತ್ಯ” ಮತ್ತು ಎರಡೂ ಕಡೆಯವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತೀರ್ಪು ನೀಡಿತು.
ಬಿಜೆಪಿ ನಾಯಕರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಆ ಸ್ಥಳದಲ್ಲಿ ದೇವಾಲಯದ ಬಗ್ಗೆ “ಸತ್ಯ” ಈಗ ಹೊರಬರಲಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement