ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆಗೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಅಲ್ಲದೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 148ಕ್ಕೆ ಏರಿದೆ.
ಕವಾಡಿಗರಹಟ್ಟಿಯ ಮನೆಯಲ್ಲೇ ಪಾರ್ವತಮ್ಮ(75) ಎಂಬವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪಾರ್ಶ್ವವಾಯುವಿಗೆ ಒಳಗಾಗಿದ್ದ ಪಾರ್ವತಮ್ಮ ಅವರಿಗೆ ಎರಡು ದಿನದಿಂದ ವಾಂತಿ, ಬೇಧಿ ಕಾಣಿಸಿಕೊಂಡಿತ್ತು. ಇಂದು ಶುಕ್ರವಾರ ನಿಧನರಾಗಿದ್ದಾರೆ. ಇಂದು, ಶುಕ್ರವಾರ ಬೆಳಗ್ಗೆ ರುದ್ರಪ್ಪ (50) ಎಂಬವರು ಸಹ ಮೃತಪಟ್ಟಿದ್ದಾರೆ. ಕಲುಷಿತ ನೀರಿನ ಸೇವನೆಗೆ ಸಂಬಂಧಿಸಿದಂತೆ ಮಂಜುಳಾ, ರಘು ಹಾಗೂ ಪ್ರವೀಣ ಎಂಬವರು ಮೃತಪಟ್ಟಿದ್ದರು.
ಕಲುಷಿತ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ ಆರ್.ಗಿರಡ್ಡಿ, ಕಿರಿಯ ಎಂಜಿನಿಯರ್ ಎಸ್.ಆರ್.ಕಿರಣ್ ಕುಮಾರ್ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ, ವಾಲ್ವ್ ಮ್ಯಾನ್ ಪ್ರಕಾಶ್ ಬಾಬು ಅವರನ್ನು ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಆಗಸ್ಟ್ 2ರಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ