ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್‌ ಪತ್ರ

ಚೆನ್ನೈ: ಕಾವೇರಿ ಜಲಾನಯನ ಪ್ರದೇಶದ ಕುರುವೈ ಬೆಳೆ ರೈತರು ಮಳೆ ಕೊರತೆ ಎದುರಿಸುತ್ತಿದ್ದು, ತಮಿಳುನಾಡಿಗೆ ನೀಡಬೇಕಾದ ಕಾವೇರಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತಮಿಳುನಾಡಿಗೆ ನಿಗದಿಪಡಿಸಿದ ನೀರಿನ ಪಾಲನ್ನು ಕರ್ನಾಟಕ ಬಿಡುಗಡೆ ಮಾಡುತ್ತಿಲ್ಲ. ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನಗಳನ್ನು ಸಹ ಅನುಸರಿಸುತ್ತಿಲ್ಲ ಎಂದು ಸ್ಟಾಲಿನ್‌ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ
ಪ್ರಸಕ್ತ 2023-2024 ನೀರಿನ ವರ್ಷದಲ್ಲಿ, ಕರ್ನಾಟಕವು ಜೂನ್ 1 ರಿಂದ ಜುಲೈ 31 ರವರೆಗೆ ಬಿಳಿಗೊಂಡ್ಲು ಪ್ರದೇಶಕ್ಕೆ 40.4 ಟಿಎಂಸಿಗೆ ಬದಲಾಗಿ 11.6 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಿದೆ. ಬಾಕಿ ಉಳಿದ 28.8 ಟಿಎಂಸಿಯಷ್ಟು ನೀರನ್ನು ಬಿಡುಗಡೆ ಮಾಡಿಲ್ಲ. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾಲ್ಕು ಪ್ರಮುಖ ಜಲಾಶಯಗಳ ಒಟ್ಟು ಸಾಮರ್ಥ್ಯದ 114.6 ಟಿಎಂಸಿಯಲ್ಲಿ ಪ್ರಸ್ತುತ 91 ಟಿಎಂಸಿ ನೀರು ಸಂಗ್ರಹವಿದೆ ಎಂದು ಎಂ.ಕೆ. ಸ್ಟಾಲಿನ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ

ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ತಮಿಳುನಾಡಿನ ಕಾವೇರಿ ನದಿ ಮುಖಜ ಭೂಮಿಯಲ್ಲಿ ಈ ಬಾರಿ ಮುಂಗಾರಿನಲ್ಲಿ ಕಡಿಮೆ ಮಳೆಯಾಗಿದೆ. ಕುರುವೈ ಕೃಷಿ ಮತ್ತು ಸಾಂಬಾ ಭತ್ತದ ಬೆಳೆಗಳು ಮೆಟ್ಟೂರು ಜಲಾಶಯದಿಂದ ನೀರನ್ನು ಬಿಡುಗಡೆ ಮಾಡುವುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಇದು ಕರ್ನಾಟಕದಿಂದ ಪಡೆಯುವ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿದೆ ಎಂದು ಸ್ಟಾಲಿನ್‌ ಪತ್ರದಲ್ಲಿ ವಿವರಿಸಿದ್ದಾರೆ.

ಮೆಟ್ಟೂರು ಜಲಾಶಯದಲ್ಲಿ ಆಗಸ್ಟ್ 2 ಕ್ಕೆ ಕೇವಲ 26.6 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಕುಡಿಯುವ ನೀರು ಮತ್ತು ಇತರ ಅಗತ್ಯಗಳಿಗೆ ಒದಗಿಸಿದ ನಂತರ ಜಲಾಶಯದಲ್ಲಿ ಕುರುವೈ ಬೆಳೆಗೆ ಲಭ್ಯವಿರುವ ನೀರು ಕೇವಲ 15 ದಿನಗಳವರೆಗೆ ಮಾತ್ರ ಸಾಕಾಗುತ್ತದೆ. ಪೂರ್ಣ ಇಳುವರಿಯನ್ನು ಪಡೆಯಬೇಕಾದರೆ ಈ ಪ್ರದೇಶದಲ್ಲಿ 45 ದಿನಗಳವರೆಗೆ ನೀರು ಬೇಕಾಗುತ್ತದೆ”ಎಂದು ಪತ್ರದಲ್ಲಿ ಸ್ಟಾಲಿನ್ ತಿಳಿಸಿದ್ದಾರೆ.
ತಮಿಳುನಾಡು ಸರ್ಕಾರವು ಈ ವಿಚಾರವನ್ನು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಗಮನಕ್ಕೂ ತಂದಿದೆ. ಹೀಗಾಗಿ, ಕರ್ನಾಟಕಕ್ಕೆ ಕಾವೇರಿ ನೀರು ಬಿಡುವಂತೆ ಸೂಚನೆ ನೀಡಬೇಕು ಹಾಗೂ ಸುಪ್ರೀಂ ಕೋರ್ಟ್, ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶಕ್ಕೆ ಬದ್ಧರಾಗಿ ಇರುವಂತೆ ನಿರ್ದೇಶಿಸಬೇಕು ಎಂದು ಸ್ಟಾಲಿನ್ ಕೋರಿದ್ದಾರೆ.

ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement