ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ರದ್ದು: ಆಹಾರ ಸಚಿವ ಮುನಿಯಪ್ಪ

ಬೆಂಗಳೂರು: ಹೊಸದಾಗಿ ಪಡಿತರ ಕಾರ್ಡ್ ವಿತರಣೆಗೆ ಸೂಚನೆ ನೀಡಲಾಗಿದೆ. ಆದರೆ ಸ್ವಂತ ಕಾರು ಹೊಂದಿದ್ದು ಬಿಪಿಎಲ್ ಕಾರ್ಡ್ ಪಡೆದಿದ್ದವರಿಗೆ ಸರ್ಕಾರ ಶಾಕ್ ನೀಡಲು ಯೋಚಿಸಿದೆ. ವೈಟ್ ಬೋರ್ಡ್ (ಬಿಳಿ ಬೋರ್ಡ್‌) ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಮಾತನಾಡಿದ ಆಹಾರ ಸಚಿವರು, ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ. ಯಲ್ಲೋ ಬೋರ್ಡ್ (ಹಳದಿ ಬೋರ್ಡ್‌) ಹೊಂದಿರುವ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ದೊರಕಲಿದೆ. ದುಡಿಯುವ ಉದ್ದೇಶದಿಂದ ಕಾರು ಖರೀದಿಸಿದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಹೊಸದಾಗಿ ಪಡಿತರ ಕಾರ್ಡ್ ವಿತರಣೆಗೆ ಸೂಚನೆ ನೀಡಲಾಗಿದೆ. ನೀತಿ ಸಂಹಿತಿ ಜಾರಿ ಹಿನ್ನೆಲೆ ರೇಷನ್​​ ಕಾರ್ಡ್​ ವಿತರಣೆ ಸ್ಥಗಿತವಾಗಿತ್ತು. ಈಗ ಹೊಸ ಪಡಿತರ ಕಾರ್ಡ್​ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಜೊತೆಗೆ ಪಡಿತರ ಕಾರ್ಡ್​ಗೆ ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದರು.
ಸೆಪ್ಟಂಬರ್ ನಿಂದ ಹಣದ ಬದಲು 10 ಕೆ.ಜಿ ಅಕ್ಕಿ ನೀಡುವ ಚಿಂತನೆ ನಡೆಸಲಾಗಿದೆ. ಅಕ್ಕಿ ಜೊತೆ ರಾಗಿ ಜೋಳ ನೀಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ಅನ್ನಭಾಗ್ಯ ಯೋಜನೆಗಾಗಿ ರಾಜ್ಯಕ್ಕೆ ಆಂಧ್ರ ಮತ್ತು ತೆಲಂಗಾಣ ಎರಡು ರಾಜ್ಯಗಳು ಅಕ್ಕಿ ಪೂರೈಸಲು ಮುಂದಾಗಿವೆ. ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದೇವೆ. 1 ವಾರದಲ್ಲಿ ಅಲ್ಲಿನ ಅಧಿಕಾರಿಗಳು ದರದ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು. ಬಿಪಿಎಲ್‌ ಕಾರ್ಡ್‌ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂ ನಂತೆ ಒಬ್ಬ ಫಲಾನುಭವಿಗೆ 170 ರೂ. ಖಾತೆಗೆ ಜಮಾ ಮಾಡಲಾಗಿದೆ. ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿ ಕುಟುಂಬಗಳಲ್ಲಿ 442 ಕೋಟಿ ಫಲಾನುಭವಿಗಳಿದ್ದಾರೆ. ಇಲ್ಲಿವರೆಗೆ 1 ಕೋಟಿ ಕುಟುಂಬಗಳಿಗೆ 566.00 ಕೋಟಿ ರೂ. ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement