ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಸಂಪೂರ್ಣ ನಿಷೇಧ: ಉಲ್ಲಂಘಿಸಿದವರಿಗೆ 50,000 ರೂ. ದಂಡ

ಬೆಂಗಳೂರು: ಬೆಂಗಳೂರಿನಲ್ಲಿ ಆಗಸ್ಟ್ 15ರ ಬಳಿಕ ಫ್ಲೆಕ್ಸ್, ಬ್ಯಾನರ್ ಸಂಪೂರ್ಣ ನಿಷೇಧಿಸಲಾಗಿದ್ದು, ಅನುಮತಿಯಿಲ್ಲದೆ ಯಾರಾದರೂ ಫ್ಲೆಕ್ಸ್, ಬ್ಯಾನರ್ ಹಾಕಿದಲ್ಲಿ 50,000 ರೂ. ದಂಡ ವಿಧಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾನರ್, ಫ್ಲೆಕ್ಸ್ ಯಾರದೇ ಆಗಿರಲಿ ಅದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದರು. ಯಾರೂ ಕೂಡ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಬಾರದು. ಯಾರದ್ದಾದರೂ ಹೆಸರಿನಲ್ಲಿ ಫ್ಲೆಕ್ಸ್ ಬ್ಯಾನರ್ ಹಾಕಿದರೆ ಅವರಿಗೂ 50,000 ರೂ. ದಂಡ ವಿಧಿಸಲಾಗುವುದು. ಎಫ್‌ಐಆರ್ ಕೂಡ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸರ್ಕಾರದಿಂದ ನಿಯಮ ರೂಪಿಸಲಾಗುತ್ತದೆ. ಅಕ್ರಮವಾಗಿ ಯಾರೂ ಫ್ಲೆಕ್ಸ್ ಹಾಕುವಂತಿಲ್ಲ. ಪ್ರಸ್ತುತ ಇರುವ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ಹೈಕೋರ್ಟ್ ಆದೇಶವಿದೆ. ಬೆಂಗಳೂರಿನಲ್ಲಿರುವ ಪ್ಲೆಕ್ಸ್, ಬ್ಯಾನರ್ ಗಳನ್ನು ತೆರವು ಮಾಡಲಾಗುವುದು. ಶುಭ ಹಾರೈಕೆ, ಜನ್ಮದಿನ, ಶ್ರದ್ಧಾಂಜಲಿ ಮೊದಲಾದ ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಿದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement