1ನೇ ತರಗತಿ ಪ್ರವೇಶಕ್ಕೆ 6 ವರ್ಷ ಆಗಿರಬೇಕು : ರಾಜ್ಯ ಸರ್ಕಾರದ ಅಧಿಸೂಚನೆ ಎತ್ತಿ ಹಿಡಿದ ಹೈಕೋರ್ಟ್‌

ಬೆಂಗಳೂರು : ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಆರು ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು 2022ರ ಜುಲೈ 26ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ನಾಲ್ಕು ವರ್ಷದ ಪುತ್ರಿ ಪ್ರಸಕ್ತ ವರ್ಷದಲ್ಲಿ ಎಲ್‌ಕೆಜಿ ಕಲಿಯಲು ಅನುಮತಿಸಬೇಕು ಎಂದು ಕೋರಿ ಬೆಂಗಳೂರಿನ ಅನಿಕೇತ (ಮಗುವಿನ ತಂದೆ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಸರ್ಕಾರದ ಅಧಿಸೂಚನೆ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಅನುಗುಣವಾಗಿದೆ. ಇದರ ಹಿಂದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಕೇಂದ್ರಿತ ಉದ್ದೇಶವಿದೆ. ತಜ್ಞರ ವರದಿ ಆಧರಿಸಿದ ನೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಜಾಗತಿಕ ಶೈಕ್ಷಣಿಕ ಮಾರ್ಗಸೂಚಿಗಳನ್ನು ಆಧರಿಸಿ ಪ್ರವೇಶಾತಿ ವಯಸ್ಸನ್ನು ಎನ್‌ಇಪಿ ಮಾನದಂಡಗಳಲ್ಲಿ ಸೇರಿಸಲಾಗಿದೆ. ಮಕ್ಕಳಿಗೆ ಸರಿಯಾದ ಆರೈಕೆ ಮತ್ತು ಶಿಕ್ಷಣ ನೀಡಬೇಕು. ಆಟ ಕೇಂದ್ರಿತ, ಚಟುವಟಿಕೆ ಕೇಂದ್ರಿತ, ಹೊಂದಿಕೊಳ್ಳುವ ಕಲಿಕೆಯ ಭರವಸೆಯ ಹಿನ್ನೆಲೆಯಲ್ಲಿ ತಜ್ಞರು ಹೊಸ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ. ಮಕ್ಕಳು ಪ್ರೌಢ ಶಿಕ್ಷಣ ಪಡೆಯುವಾಗ ಅವರಲ್ಲಿ ಪರೀಕ್ಷಾ ಸಂಬಂಧಿ ಒತ್ತಡ ಮತ್ತು ಭಯ ಹೋಗಲಾಡಿಸುವ ಉದ್ದೇಶದಿಂದ ಸಮಗ್ರ ನೀತಿ ರೂಪಿಸಲಾಗಿದೆ ಎಂದು ತಜ್ಞರು ಹೇಳಿರುವಾಗ ಸಕ್ಷಮ ಪ್ರಾಧಿಕಾರ ರೂಪಿಸಿರುವ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ:

ಪ್ರಮುಖ ಸುದ್ದಿ :-   ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ

ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತಮ್ಮ ಪುತ್ರಿಯನ್ನು ಪ್ರಸಕ್ತ ವರ್ಷ ಎಲ್‌ಕೆಜಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಆಕೆಯ ಪೋಷಕರು ಕೋರಿದ್ದರು. ಇದನ್ನು ಮನ್ನಿಸಿ ಈ ಸಂಬಂಧ ಶಾಲೆಯು ಶುಲ್ಕವನ್ನೂ ವಸೂಲಿ ಮಾಡಿತ್ತು.
ಮಗುವು 2023ರ ಜೂನ್‌ 1ಕ್ಕೆ ಸರಿಯಾಗಿ ನಾಲ್ಕು ವರ್ಷ ಪೂರ್ಣಗೊಳಿಸದಿರುವುದರಿಂದ ಆಕೆ ಎಲ್‌ಕೆಜಿಗೆ ಪ್ರವೇಶ ಪಡೆಯಲು ಅರ್ಹಳಲ್ಲ ಎಂದು ಶಾಲೆಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರ 2018ರ ಮೇ 23ರ ಆದೇಶ ಉಲ್ಲೇಖಿಸಿ (ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ನಿಗದಿ ಮಾಡಿರುವ ಆದೇಶ) 2023ರ ಮೇ 27ರಂದು ಪೋಷಕರಿಗೆ ಶಾಲೆಯು ಈಮೇಲ್‌ ಕಳುಹಿಸಿತ್ತು. ಮಗುವನ್ನು ನರ್ಸರಿಯಲ್ಲೇ ಉಳಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿತ್ತು. 2018ರ ಮೇ 23ರ ಆದೇಶದಲ್ಲಿ ರಾಜ್ಯ ಸರ್ಕಾರವು ಒಂದನೇ ತರಗತಿ ಪ್ರವೇಶಕ್ಕೆ 2025-26ನೇ ಸಾಲಿನಲ್ಲಿ ಆರು ವರ್ಷ ತುಂಬಿರಬೇಕು ಎಂದು ಹೇಳಿದೆ. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement