ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ದಂಡ, ಎಟಿಎಂ-ಎಸ್‌ಎಂಎಸ್ ಶುಲ್ಕಗಳಿಂದ 35,000 ಕೋಟಿ ರೂ. ಸಂಗ್ರಹಿಸಿದ ಬ್ಯಾಂಕುಗಳು

ನವದೆಹಲಿ : ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಐದು ಖಾಸಗಿ ವಲಯದ ಬ್ಯಾಂಕ್‌ಗಳು 2018 ರಿಂದ ಎಸ್‌ಎಂಎಸ್, ಎಟಿಎಂ ವಹಿವಾಟು ಸೇವೆಗಳಿಗಾಗಿ ಹಾಗೂ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದ ಕಾರಣಕ್ಕಾಗಿ ದಂಡದ ಮೂಲಕ 35,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ವಿತ್ತ ಸಚಿವಾಲಯದ ರಾಜ್ಯ ಸಚಿವ ಡಾ.ಭಾಗವತ್ ಕರದ್ ಅವರು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಇಲ್ಲದ ಕಾರಣ ಗ್ರಾಹಕರಿಂದ 21,044.04 ಕೋಟಿ ರೂ., ಎಟಿಎಂ ವಹಿವಾಟಿನ ಮಿತಿ ದಾಟಿದ್ದಕ್ಕೆ 8,289.32 ಕೋಟಿ ರೂ.ಗಳು ಮತ್ತು ಎಸ್‌ಎಂಎಸ್‌ಗೆ ಶುಲ್ಕ ವಿಧಿಸುವ ಮೂಲಕ 6,254.32 ರೂ.ಗಳನ್ನು ಸಂಗ್ರಹಿಸಿವೆ. 2018ರಿಂದ ಈಚೆಗೆ ಗ್ರಾಹಕರಿಂದ ಒಟ್ಟು 35,587.68 ಕೋಟಿ ಸಂಗ್ರಹಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ ಬ್ಯಾಂಕ್‌ಗಳು ಮಾಸಿಕ ಉಚಿತ ವಹಿವಾಟು ಮಿತಿಗಿಂತ ಹೆಚ್ಚಿನ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 21 ರೂ.ವರೆಗೆ ಶುಲ್ಕ ವಿಧಿಸಲು ಅರ್ಹವಾಗಿವೆ. ಹೆಚ್ಚಿನ ಬ್ಯಾಂಕ್‌ಗಳು ಗ್ರಾಹಕರಿಗೆ ತನ್ನ ಗುಂಪಿನ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳನ್ನು ನೀಡುತ್ತವೆ, ಆದಾಗ್ಯೂ, ದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಎಟಿಎಂಗಳ ಉಚಿತ ವಹಿವಾಟಿನ ಮಿತಿಯು ತಿಂಗಳಿಗೆ 3 ಆಗಿದೆ.
2021ರ ಜೂನ್‌ 10ರ ಆರ್‌ಬಿಐ ಅಧಿಸೂಚನೆಯ ಪ್ರಕಾರ, ಗ್ರಾಹಕರು ತಾವು ಖಾತೆ ಹೊಂದಿರುವ ಬ್ಯಾಂಕಿನ ಎಟಿಎಂ ಮೂಲಕ ಪ್ರತಿ ತಿಂಗಳು ಐದು ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕ್‌ ಎಟಿಎಂ ಮೂಲಕ ನಗರ ಪ್ರದೇಶದಲ್ಲಿ ತಿಂಗಳಿಗೆ ಮೂರು ಬಾರಿ, ಗ್ರಾಮೀಣ ಭಾಗದಲ್ಲಿ ತಿಂಗಳಿಗೆ ಐದು ಬಾರಿ ಮಾತ್ರ ಶುಲ್ಕ ರಹಿತವಾಗಿ ವಹಿವಾಟು ನಡೆಸುವ ಮಿತಿ ವಿಧಿಸಲಾಗಿದೆ. ಈ ಮಿತಿ ಮೀರಿದರೆ ಪ್ರತಿ ವಹಿವಾಟಿಗೆ ಗರಿಷ್ಠ 21 ರೂ.ಗಳ ವರೆಗೆ ಶುಲ್ಕ ವಿಧಿಸಿಬಹುದಾಗಿದೆ. ಇದು 2022ರ ಜನವರಿ1ರಿಂದ ಜಾರಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆರ್‌ಬಿಐ 2015ರ ಜುಲೈ 1ರಂದು ಹೊರಡಿಸಿರುವ ಪ್ರಕಟಣೆಯಂತೆ, ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳದವರಿಗೆ ಬ್ಯಾಂಕ್‌ನ ಆಡಳಿತ ಮಂಡಳಿ ಒಪ್ಪಿರುವ ನೀತಿಯಂತೆ ದಂಡ ವಿಧಿಸಲು ಬ್ಯಾಂಕ್‌ಗಳಿಗೆ ಅವಕಾಶ ಇದೆ. ಆದರೆ, ಹೀಗೆ ವಿಧಿಸುವ ದಂಡವು ನ್ಯಾಯೋಚಿತವಾಗಿ ಇರಬೇಕು ಮತ್ತು ಸೇವೆಗಳನ್ನು ನೀಡುವುದಕ್ಕೆ ತಗಲುವ ಸರಾಸರಿ ವೆಚ್ಚಕ್ಕಿಂತಲೂ ಹೆಚ್ಚಿಗೆ ಇರದಂತೆ ನೋಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ಜಿಯೊ, ಏರ್‌ಟೆಲ್‌ ಮೊಬೈಲ್ ರಿಚಾರ್ಜ್‌ ದರ ಹೆಚ್ಚಳ : ಜುಲೈ 3ರಿಂದ ಜಾರಿ; ವಿವಿಧ ಪ್ಲಾನ್‌ಗಳ ದರ ಹೆಚ್ಚಳದ ವಿವರ ಇಲ್ಲಿದೆ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement