ನವದೆಹಲಿ: ಸುಳ್ಳು ಸುದ್ದಿಗಳನ್ನು ಹರಡಿದ ಹಾಗೂ ದೇಶ ವಿರೋಧಿ ಚುಟವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇರೆಗೆ ಕೇಂದ್ರ ಸರಕಾರವು ಹೊಸದಾಗಿ 8 ಯುಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ.
23 ಮಿಲಿಯನ್ ಸಂಚಿತ ಚಂದಾದಾರರ ಸಂಖ್ಯೆ ಹೊಂದಿರುವ ಎಂಟು ಯೂಟ್ಯೂಬ್ ಚಾನೆಲ್‌ಗಳಾದ ಯಹಾ ಸಚ್ ದೇಖೋ, ಕ್ಯಾಪಿಟಲ್ ಟಿವಿ, ಕೆಪಿಎಸ್ ನ್ಯೂಸ್, ಸರ್ಕಾರಿ ವ್ಲಾಗ್, ಅರ್ನ್ ಟೆಕ್ ಇಂಡಿಯಾ, ಎಸ್‌ಪಿಎನ್ 9 ನ್ಯೂಸ್, ಎಜುಕೇಷನಲ್ ದೋಸ್ತ್ ಮತ್ತು ವರ್ಲ್ಡ್ ಬೆಸ್ಟ್ ನ್ಯೂಸ್ ಯೂ ಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ. ಈ ಯೂಟ್ಯೂಬ್ ಚಾನೆಲ್‌ಗಳಲ್ಲಿನ ವೀಡಿಯೊಗಳನ್ನು ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಪತ್ರಿಕಾ ಮಾಹಿತಿ ಬ್ಯೂರೋ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಚಾನೆಲ್‌ಗಳು 2.3 ಕೋಟಿ ಚಂದಾದಾರರನ್ನು ಹೊಂದಿದ್ದವು.
ದೇಶದ ಭದ್ರತೆ, ಆಡಳಿತ, ವಿದೇಶಾಂಗ ವ್ಯವಹಾರ, ಧಾರ್ಮಿಕ ವಿಷಯಗಳ ಬಗ್ಗೆ ತಪ್ಪು ಮಾಹಿತಿ ಪ್ರಸರಿಸುತ್ತಿರುವ ಯೂಟ್ಯೂಬ್ ಚಾನೆಲ್, ವೆಬ್‌ಸೈಟ್‌ಗಳ ವಿರುದ್ಧ ಕೇಂದ್ರ ಸರ್ಕಾರವು 2021ರ ಐಟಿ ನಿಯಮದ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ, ಸರಕಾರದ ವಿವಿಧ ಯೋಜನೆಗಳು, ಚುನಾವಣಾ ಆಯೋಗ, ಇವಿಎಂ ತಿರುಚುವಿಕೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಆಧಾರ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪದ ಮೇರೆಗೆ ಈ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ