ಬೆಂಗಳೂರು : ಕೇಂದ್ರ ಸರ್ಕಾರವು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ (ಈಗ ಎಕ್ಸ್ ಕಾರ್ಪ್ ) ಫೆಬ್ರವರಿ 2021 ಮತ್ತು 2022 ರ ನಡುವೆ ಆಯ್ದ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲು ಸೂಚಿಸಿ ಮಾಡಿದ್ದ ಆದೇಶಗಳನ್ನು ಕಾಲಮಿತಿಯಲ್ಲಿ ಪಾಲಿಸಲು ವಿಫಲವಾದ ಆರೋಪದ ಮೇಲೆ ಟ್ವಿಟರ್‌ಗೆ (ಈಗ ಎಕ್ಸ್ ಕಾರ್ಪ್) ಹೈಕೋರ್ಟ್‌ನ ಏಕಸದಸ್ಯ ಪೀಠವು ವಿಧಿಸಿದ್ದ ₹50 ಲಕ್ಷ ದಂಡದ ಆದೇಶಕ್ಕೆ ಗುರುವಾರ ವಿಭಾಗೀಯ ಪೀಠವು ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆ ನೀಡಿದೆ.
ಎಕ್ಸ್ ಕಾರ್ಪ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ಒಂದು ವಾರದಲ್ಲಿ ಮೇಲ್ಮನವಿದಾರರು ₹25 ಲಕ್ಷ ರೂಪಾಯಿಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಆದೇಶಕ್ಕೆ ಒಳಪಟ್ಟು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತು. ಕಳೆದ ಜೂನ್‌ನಲ್ಲಿ ಏಕಸದಸ್ಯ ಪೀಠವು ₹50 ಲಕ್ಷ ದಂಡ ವಿಧಿಸಿ ಆದೇಶಿಸಿತ್ತು.
ಏನಿದು ಪ್ರಕರಣ?
ಫೆಬ್ರವರಿ 2021 ಮತ್ತು ಫೆಬ್ರವರಿ 2022ರ ನಡುವೆ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಟ್ವೀಟ್‌ಗಳನ್ನು ನಿರ್ಬಂಧಿಸಲು ಕೇಂದ್ರವು ಟ್ವಿಟರ್‌ಗೆ ಸೂಚಿಸಿತ್ತು. ಈ ಪೈಕಿ ಟ್ವಿಟರ್ 39 ನಿರ್ಬಂಧಿಸುವ ಆದೇಶಗಳನ್ನು ಸವಾಲು ಮಾಡಿತ್ತು. 2022 ರಲ್ಲಿ, ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ಅಡಿಯಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಿಂದ ವಿಷಯವನ್ನು ತೆಗೆದುಹಾಕುವ ಕೇಂದ್ರದ ಆದೇಶವನ್ನು ಪ್ರಶ್ನಿಸಿ ಟ್ವಿಟರ್ ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿತ್ತು.
ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಖಾತೆಯನ್ನು ನಿರ್ಬಂಧಿಸಲು ಕೇಂದ್ರ ಹೊರಡಿಸಿದ ಆದೇಶವು ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡಬೇಕು ಎಂದು ಟ್ವಿಟರ್ ಪ್ರತಿಪಾದಿಸಿದೆ. ಅಗತ್ಯವಿದ್ದಲ್ಲಿ, ಆದೇಶವನ್ನು (ಐಟಿ ಕಾಯಿದೆ, 2000 ರ ಸೆಕ್ಷನ್ 69 ಎ ಅಡಿಯಲ್ಲಿ ಹೊರಡಿಸಲಾಗಿದೆ) ಪ್ರಶ್ನಿಸಲು ಒಂದು ಮಾನದಂಡವನ್ನು ಜಾರಿಗೆ ತರಬೇಕು ಎಂದು ಅದು ಒತ್ತಾಯಿಸಿತು.
ನಿರ್ಬಂಧದ ಆದೇಶ ಹೊರಡಿಸುವ ಮೊದಲು ಸರ್ಕಾರ ಮತ್ತು ಟ್ವಿಟರ್ ಪ್ರತಿನಿಧಿಗಳ ನಡುವೆ ಸುಮಾರು 50 ಸಭೆಗಳನ್ನು ನಡೆಸಲಾಗಿದೆ ಎಂದು ಕೇಂದ್ರವು ಹೈಕೋರ್ಟ್‌ಗೆ ತಿಳಿಸಿದೆ. ಟ್ವಿಟರ್ “ಹಲವಾರು ವರ್ಷಗಳಿಂದ ರೂಢಿಗತವಲ್ಲದ ವೇದಿಕೆಯಾಗಿದೆ” ಎಂದು ಕೇಂದ್ರವು ಹೇಳಿದೆ, “ಈ ನೆಲದ ಕಾನೂನುಗಳನ್ನು ಅನುಸರಿಸದಿರುವ ಸ್ಪಷ್ಟ ಉದ್ದೇಶ ಟ್ವಿಟರ್‌ಗೆ ಇದೆ” ಎಂದು ಅದು ಹೇಳಿದೆ.
ಜೂನ್‌ನಲ್ಲಿ, ಹೈಕೋರ್ಟ್ ಏಕ ಸದಸ್ಯ ಪೀಠವು ಕೇಂದ್ರದ ಆದೇಶಗಳ ವಿರುದ್ಧ ಟ್ವಿಟರ್‌ನ ಮನವಿ ಅರ್ಜಿಯನ್ನು ವಜಾಗೊಳಿಸಿತು ಮತ್ತು ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸದೇ ಇದ್ದುದಕ್ಕಾಗಿ ಕಂಪನಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಿತು. ಏಕಸದಸ್ಯ ಪೀಠವು ಆಗಸ್ಟ್ 14 ರೊಳಗೆ 50 ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ಟ್ವಿಟರ್‌ಗೆ ಆದೇಶಿಸಿತ್ತು.
ಆದರೆ, ಗುರುವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ನ್ಯಾಯಪೀಠ ಹಿಂದಿನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ. ನ್ಯಾಯಾಲಯದ ಆದೇಶದ ನಂತರ, ಎಕ್ಸ್ ಕಾರ್ಪ್ ಈಗ ಈ ನಿಯಮಗಳ ಮೇಲೆ ದಂಡವನ್ನು ಪಾವತಿಸಬೇಕಾಗಿಲ್ಲ, ಅದು ಒಂದು ವಾರದೊಳಗೆ 25 ಲಕ್ಷ ರೂ. ಮೊತ್ತವನ್ನು ಠೇವಣಿ ಮಾಡಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ