ಎಮ್ಮೆ ಕಳ್ಳತನ ಪ್ರಕರಣ: 11 ವರ್ಷಗಳ ನಂತರ ನ್ಯಾಯಾಲಯಕ್ಕೆ ಹಾಜರಾದ ಎಮ್ಮೆ

ಸಾಮಾನ್ಯವಾಗಿ ಕೋರ್ಟ್ ಆವರಣಕ್ಕೆ ವಕೀಲರು, ಪೋಲೀಸರು, ದೂರುದಾರರು, ಸಂಬಂಧಪಟ್ಟವರು ಬಂದು ಹೋಗುತ್ತಾರೆ, ಆದರೆ ಎಮ್ಮೆ ಈ ರೀತಿ ನ್ಯಾಯಾಲಯಕ್ಕೆ ಹಾಜರಾದರೆ..? ಬಹುಶಃ ಯಾರೂ ಯೋಚಿಸಿರಲಿಲ್ಲ. ಆದರೆ ಈ ವಿಶಿಷ್ಟ ಪ್ರಕರಣ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಎಮ್ಮೆಯೊಂದನ್ನು ಚೋಮು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು, ಇದನ್ನು ನೋಡಿ ವಕೀಲರು ಸಹ ಆಶ್ಚರ್ಯಚಕಿತರಾದರು.
ವಾಸ್ತವವಾಗಿ, ಇದು 26 ಜುಲೈ 2012ರ ಘಟನೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಸುಮಾರು 11 ವರ್ಷಗಳ ಹಿಂದೆ, ಹರ್ಮಾಡಾ ಪ್ರದೇಶದಲ್ಲಿ ವಾಸಿಸುತ್ತಿದ್ದ 48 ವರ್ಷದ ಚರಣ್ ಸಿಂಗ್ ಶೇಖಾವತ್ ಅವರ ಮೂರು ಎಮ್ಮೆಗಳ ಕಳ್ಳತನವಾಗಿತ್ತು. ಅವರ ಮೂರು ಬೆಲೆಬಾಳುವ ಎಮ್ಮೆಗಳು ಕಳ್ಳತನವಾಗಿತ್ತ. ಲಕ್ಷ ಮೌಲ್ಯದ ಮೂರು ಎಮ್ಮೆಗಳು ಕಳ್ಳತನವಾದ ನಂತರ ಅವರು ಹರ್ಮಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪ್ರಕರಣ ದಾಖಲಾದ ಕೆಲವು ದಿನಗಳ ನಂತರ ಭರತಪುರ ಪೊಲೀಸರು ಎಮ್ಮೆಗಳನ್ನು ಪತ್ತೆ ಹಚ್ಚಿದರು. ಅದರಲ್ಲಿ ಒಂದು ಎಮ್ಮೆ ಸಾವಿಗೀಡಾಗಿತ್ತು. ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಜಾಮೀನು ನೀಡಲಾಗಿದೆ. ಹರ್ಮಾಡ ಪೊಲೀಸರು ದೂರುದಾರರಿಗೆ ಎಮ್ಮೆಗಳನ್ನು ನೋಡಲು ಹೇಳಿ ಕಳುಹಿಸಿದ್ದಾರೆ. ದೂರುದಾರ ಚರಣ್ ಸಿಂಗ್ ಎಮ್ಮೆಗಳನ್ನು ಗುರುತಿಸಿದ ನಂತರ ಪೊಲೀಸರು ಚರಣ್ ಸಿಂಗ್ ಅವರಿಗೆ ಎಮ್ಮೆಗಳನ್ನು ಹಸ್ತಾಂತರಿಸಿದರು.
ಹರ್ಮಾಡ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದ್ದರಿಂದ ಪ್ರಕರಣ ಮುಂದುವರಿಯಿತು. ಅದು ಕೋರ್ಟ್‌ ಮುಂದೆ ಬಂತು. ಹಲವು ವರ್ಷಗಳಿಂದ ಈ ಪ್ರಕರಣ ನಡೆಯುತ್ತಿದೆ. ಈ ಮಧ್ಯೆ ಎರಡರಲ್ಲಿ ಮತ್ತೊಂದು ಎಮ್ಮೆ ಸಾವಿಗೀಡಾಗಿತ್ತು. ಇತ್ತೀಚೆಗಷ್ಟೇ ಪ್ರಕರಣದ ವಿಚಾರಣೆಯ ಭಾಗವಾಗಿ ಕಳೆದು ಹೋಗಿದ್ದ ಎಮ್ಮೆಯನ್ನು ಗುರುತಿಸಲು ನ್ಯಾಯಾಲಯದ ಆವರಣಕ್ಕೆ ಅದನ್ನು ತರಲು ಪಬ್ಲಿಕ್ ಪ್ರಾಸಿಕ್ಯೂಟರ್ ವಿನಂತಿಸಿದರು. ಸಾಕ್ಷಿದಾರರಿಗೆ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿಕೊಳ್ಳುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.
ಆಗಸ್ಟ್‌ 10ರಂದು ಎಮ್ಮೆಯನ್ನು ಗುರುತಿಸುವ ಸಲುವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರಲಾಯಿತು. ಮಾಲೀಕ ಚರಣ್ ಸಿಂಗ್ ಎಮ್ಮೆಯನ್ನು ವಾಹನದಲ್ಲಿ ತುಂಬಿಕೊಂಡು ಚೋಮು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕ್ರಮ ಸಂಖ್ಯೆ-10 ಅನ್ನು ತಲುಪಿದರು.
ಕೋರ್ಟ್ ಆವರಣದೊಳಕ್ಕೆ ವಾಹನದಲ್ಲಿ ಎಮ್ಮೆ ಕರೆತಂದಿದ್ದನ್ನು ನೋಡಿ ವಕೀಲರು, ಅಲ್ಲಿದ್ದ ಜನ ಆಶ್ಚರ್ಯಚಕಿತರಾದರು. ಸಾಕ್ಷಿ ಸುಭಾಷ ಚೌಧರಿ ಕೂಡ ಕೋರ್ಟ್ ತಲುಪಿದರು. ಇದಾದ ನಂತರ, ಸಾಕ್ಷಿದಾರರು ನ್ಯಾಯಾಲಯದ ಆವರಣದಲ್ಲಿ ಎಮ್ಮೆಯನ್ನು ಗುರುತಿಸಿದರು, ನಂತರ ಎಮ್ಮೆಯನ್ನು ತಾತ್ಕಾಲಿಕವಾಗಿ ಮಾಲೀಕ ಚರಣ್ ಸಿಂಗ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಪ್ರಕರಣದಲ್ಲಿ ಒಟ್ಟು 21 ಸಾಕ್ಷಿಗಳಿದ್ದು, ಆಗಿನ ನಗರ ಪೊಲೀಸ್ ಅಧಿಕಾರಿ ಹೀರಾಲಾಲ್ ಸೈನಿ, ದೂರುದಾರ ಚರಣ್ ಸಿಂಗ್ ಸೇರಿದಂತೆ 5 ಜನರ ಹೇಳಿಕೆಗಳನ್ನು ಮಾತ್ರ ದಾಖಲಿಸಲಾಗಿದೆ. ಇನ್ನೂ 16 ಸಾಕ್ಷಿಗಳು ಹೇಳಿಕೆ ನೀಡಬೇಕಿದೆ. ಪ್ರಕರಣದ ವಿಚಾರಣೆಯನ್ನು 2023 ಸೆಪ್ಟೆಂಬರ್ 13ಕ್ಕೆ ಮುಂದೂಡಲಾಯಿತು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement