ಬೆಂಗಳೂರು: ನಾನು ಗುತ್ತಿಗೆದಾರರ ಬಳಿ 15% ಕಮಿಷನ್ ಕೇಳಿದ್ದರೆ ಇಂದೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ತಮ್ಮ ವಿರುದ್ಧ ಕಮಿಷನ್ ಆರೋಪ ಹಿನ್ನೆಲೆ ಈ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾಕೆ ಬಿಲ್ ಪಾವತಿ ಮಾಡಿಲ್ಲ..? ಗುತ್ತಿಗೆದಾರರ ಬಿಲ್ ಪಾವತಿ ಮಾಡಲು ಆಗ ಯಾರು ಅಡ್ಡಿ ಮಾಡಿದ್ದರು ? ಆಗ ಸರ್ಕಾರದ ಬಳಿ ಹಣ ಇರಲಿಲ್ಲವೇ? ಕೆಲಸ ಸರಿ ಮಾಡಿರಲಿಲ್ಲವೇ? ಈ ಪ್ರಶ್ನೆಗೆ ಬಿಜೆಪಿ ನಾಯಕರು ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಗುತ್ತಿಗೆದಾರರಿಗೆ ನಾನು ಉತ್ತರ ನೀಡುತ್ತೇನೆ. ಗುತ್ತಿಗೆದಾರರ ದೂರಿನ ಹಿಂದೆ ಯಾರಿದ್ದಾರೆ ಎಂಬುದು ಗೊತ್ತು. ಯಾರಿಗೆಲ್ಲ ದೂರು ನೀಡುತ್ತಾಎರೋ ನೀಡಲಿ. ನಾನು ಗುತ್ತಿಗೆದಾರರ ಬಳಿ ಕಮಿಷನ್ ಕೇಳಿಲ್ಲ. ನನ್ನ ಮೇಲಿನ ಕಮಿಷನ್ ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಡಿ.ಕೆ ಶಿವಕುಮಾರ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳು, ಕೆಂಪಣ್ಣ ಅವರ ದೂರಿನ ಆಧಾರದ ಮೇಲೆ ಸಮರ್ಪಕ ಕೆಲಸ ಆಗಿದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಿ ಎಂದು ಸೂಚಿಸಿದರು. ಬಿಜೆಪಿ ನಾಯಕರು ಕೂಡ ಸದನದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ಮಾಡಿ ಎಂದು ಹೇಳಿದ್ದರು. ಹೀಗಾಗಿ ನಾವು ತನಿಖಾ ಸಮಿತಿ ರಚನೆ ಮಾಡಿ ಕಾಮಗಾರಿಗಳ ಕೆಲಸ ಆಗಿದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಲು ಸೂಚಿಸಿದ್ದೇವೆ, ಆದರೆ ತಮ್ಮ ಸರ್ಕಾರವಿದ್ದಾಗ ಮೂರ್ನಾಲ್ಕು ವರ್ಷಗಳಿಂದ ಬಿಲ್ ಪಾವತಿ ಆಗದಿದ್ದಾಗ ಸುಮ್ಮನಿದ್ದವರು, ಈಗ ತನಿಖೆ ಮುಗಿಯುವವರೆಗೂ ಕಾಯಲು ಯಾಕೆ ಸಿದ್ಧರಿಲ್ಲ? ಹಿಂದಿನ ಮರ್ಮ ಏನು ಎಂದು ಪ್ರಶ್ನಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ