ಚೆನ್ನೈನಲ್ಲಿ ನಡೆದ ಭಯಾನಕ ಘಟನೆಯೊಂದರಲ್ಲಿ ಶಾಲಾ ಬಾಲಕಿಯೊಬ್ಬಳು ತನ್ನ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಹಸುವೊಂದು ಅಮಾನುಷವಾಗಿ ದಾಳಿ ಮಾಡಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆಯ ಭಯಾನಕ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆಗಸ್ಟ್ 9 ರಂದು ಈ ಘಟನೆ ಚೆನ್ನೈನ ಎಂಎಂಡಿಎ ಕಾಲೋನಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಎರಡು ಹಸುಗಳು ರಸ್ತೆಯ ಒಂದು ಬದಿಯಲ್ಲಿ ಮುಂದೆ ಹೋಗುತ್ತಿವೆ. ಕುಟುಂಬವು ರಸ್ತೆಯ ಮತ್ತೊಂದು ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಇದ್ದಕ್ಕಿದ್ದಂತೆ, ದೊಡ್ಡ ಹಸು ಹಿಂದೆ ತಿರುಗಿ ಹುಡುಗಿಯ ಮೇಲೆ ದಾಳಿ ಮಾಡಿತು, ಅವಳನ್ನು ತನ್ನ ಕೊಂಬುಗಳಿಂದ ಎತ್ತಿ ನೆಲದ ಮೇಲೆ ಎಸೆಯಿತು. ಹುಡುಗಿಯ ಕಿರಿಯ ಸಹೋದರ ಮಾಡಿದ ಶಬ್ದಗಳಿಂದ ಹಸು ಪ್ರಚೋದಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ.
ಆಯೇಷಾ ಮತ್ತು ಅವರ ಕುಟುಂಬ ಎರಡು ಹಸುಗಳ ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯ ಸಹೋದರನ ಹಠಾತ್ ಶಬ್ದವು ಹಸುವನ್ನು ಪ್ರಚೋದಿಸಿತು. ಅವುಗಳಲ್ಲಿ ಒಂದು ಆಕ್ರಮಣಕಾರಿಯಾಯಿತು. ವೇಗವಾಗಿ ಹಿಂದೆ ತಿರುಗಿ ಆಯೇಷಾಳನ್ನು ಹೊಡೆದು, ಅವಳನ್ನು ಎತ್ತಿ ರಸ್ತೆಗೆ ಎಸೆಯಿತು.
ತಾಯಿ-ಮಗ ಇಬ್ಬರೂ ತಪ್ಪಿಸಿಕೊಂಡು ದೂರ ಓಡಿ ಹೋದರು. ಹುಡುಗಿಯ ಮೇಲೆ ಎರಡು ಹಸುಗಳು ಪದೇ ಪದೇ ದಾಳಿ ಮಾಡಿವೆ ಹಾಗೂ ತುಳಿದಿವೆ. ಬಾಲಕಿಯ ಕಿರುಚಾಟ ಮತ್ತು ತಾಯಿಯ ಆಕ್ರಂದನ ಕೇಳಿದ ಅಕ್ಕಪಕ್ಕದ ಮನೆಯಿಂದ ಜನರು ಹೊರಬಂದು ಆಕೆಗೆ ಸಹಾಯ ಮಾಡಲು ಧಾವಿಸಿದರು. ಕೆಲವು ಪುರುಷರು ಕಲ್ಲುಗಳನ್ನು ಎಸೆದರು. ಮತ್ತು ಜೋರಾಗಿ ಕೂಗುವ ಮೂಲಕ ಹಸುಗಳನ್ನು ಹೆದರಿಸಲು ಪ್ರಯತ್ನಿಸಿದರು. ಆದರೆ, ಹಸುಗಳು ಜಿದ್ದಿಗೆ ಬಿದ್ದಂತೆ ಪುಟ್ಟ ಹುಡುಗಿಯ ಮೇಲೆ ದಾಳಿ ಮಾಡುತ್ತಲೇ ಇದ್ದವು.
ಒಂದು ಹಂತದಲ್ಲಿ, ಜನರು ಅದನ್ನು ಬೆದರಿಸಿ ಓಡಿಸಲು ಯಶಸ್ವಿಯಾದರೂ ಜಾಗ ಬಿಟ್ಟು ತೆರಳಿದ ಹಸುಗಳು ಮತ್ತೆ ಬಂದು ಹುಡುಗಿಯ ಮೇಲೆ ದಾಳಿ ಮಾಡಿದವು. ಕೊನೆಗೆ ಸ್ಥಳೀಯರೊಬ್ಬರು ಕೋಲು ಹಿಡಿದು ಬಂದು ಹಸುಗಳನ್ನು ಬೆದರಿಸಲು ಯತ್ನಿಸಿದ ನಂತರ ಹಸುಗಳು ಸ್ಥಳದಿಂದ ಓಡಿ ಹೋಗಿವೆ. ನಂತರ ಬಾಲಕಿಯನ್ನು ರಕ್ಷಿಸಲಾಗಿದ್ದು, ಬಾಲಕಿಯು ಎದ್ದು ನಿಲ್ಲಲು ಹೆಣಗಾಡುತ್ತಿರುವುದು ಕಂಡುಬಂದಿದೆ. ಆಕೆಯ ಗಾಯಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಆಕೆಯ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ಹಸುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಜಾಗರೂಕತೆಯಿಂದ ಅಲೆದಾಡುವ ಜಾನುವಾರುಗಳ ಮಾಲೀಕರಿಗೆ ದಂಡ ವಿಧಿಸುವುದು ಸೇರಿದಂತೆ ಇಂತಹ ಘಟನೆಗಳನ್ನು ತಡೆಯಲು ಕ್ರಮಗಳನ್ನು ಬಲಪಡಿಸಲು ಯೋಜಿಸುತ್ತಿದ್ದಾರೆ. ದಾಳಿ ಮಾಡಿದ ಹಸುಗಳ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ