ಬೆಂಗಳೂರು : ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ ಕೆರೆಹಳ್ಳಿ ವಿರುದ್ಥ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ 11 ಪೊಲೀಸ್ ಠಾಣೆಗಳಲ್ಲಿ ಪುನೀತ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪುನೀತ ಅಪರಾಧ ಪ್ರಕರಣದಲ್ಲಿ ಪದೇ ಪದೇ ಭಾಗಿಯಾಗುತ್ತಿರುವ ಹಿನ್ನಲೆ ಪುನೀತ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
2013ರಿಂದ 2023ರ ವರೆಗೆ ಕಳೆದ 10 ವರ್ಷಗಳಲ್ಲಿ ಪುನೀತ್ ಕೆರೆಹಳ್ಳಿ (32) ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಮಾಜ ವಿರೋಧಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪದೇ ಪದೇ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಕರೆಹಳ್ಳಿ ವಿರುದ್ಧ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯ (Gunda Act) ಅಡಿ ಕೇಸ್ ದಾಖಲಿಸಿದ್ದಾರೆ.
ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ ಪೊಲೀಸರು ನೇರವಾಗಿ ಜೈಲಿಗೆ ಕಳುಹಿಸಿದ್ದಾರೆ. ಗೂಂಡಾ ಕಾಯ್ದೆಯಲ್ಲಿ ಬಂಧನಕ್ಕೆ ಒಳಗಾದ ಆರೋಪಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯವಿಲ್ಲ ಮತ್ತು ಒಂದು ವರ್ಷ ಜಾಮೀನು (Bail) ಸಿಗುವುದಿಲ್ಲ.
ಹಾಸನ ಜಿಲ್ಲೆಯ ಅಲೂರು ತಾಲೂಕಿನ ಕೆರೆಹಳ್ಳಿಯ ಪುನೀತ ಕೆರೆಹಳ್ಳಿ, ಬೆಂಗಳೂರಿನ ಜೆ.ಪಿ.ನಗರದ7ನೇ ಹಂತದಲ್ಲಿ ವಾಸವಾಗಿದ್ದ . ರಾಷ್ಟ್ರ ರಕ್ಷಣಾ ಪಡೆ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವ, ಗೋ ರಕ್ಷಣೆ ಹೆಸರಿನಲ್ಲಿ ವ್ಯಾಪಾರಿಗಳನ್ನು ಬೆದರಿಸುವ ಕಾರ್ಯಗಳಲ್ಲಿ ತೊಡಗಿದ ಆರೋಪ ಪುನೀತ್ ಕೆರೆಹಳ್ಳಿ ಮೇಲೆ ಬಂದಿತ್ತು. ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಲು ಪೊಲೀಸರು ಒಂದು ತಿಂಗಳು ಸಿದ್ಧತೆ ನಡೆಸುತ್ತಿದ್ದರು. ಈ ಬಗ್ಗೆ ಕಳೆದ ತಿಂಗಳು ಚಾಮರಾಜಪೇಟೆ ಉಪ ವಿಭಾಗದ ಪೊಲೀಸರು ಪುನೀತ್ಗೆ ತಿಳಿವಳಿಕೆ ನೋಟಿಸ್ ಜಾರಿ ಮಾಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ