ಜಾತಿ ನಿಂದನೆ ಪ್ರಕರಣ: ನಟ ಉಪೇಂದ್ರ ವಿರುದ್ಧದ ಎಫ್‌ ಐ ಆರ್‌ ಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

ಬೆಂಗಳೂರು: ಜಾತಿ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ಅವರ ವಿರುದ್ಧ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ದಕ್ಷಿಣ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ನೀಡಿರುವ ದೂರು ಆಧರಿಸಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್‌ 3(1)(ಆರ್‌)(ಎಸ್‌) ಅಡಿ ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ನಟ ಉಪೇಂದ್ರ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ ನೇತೃತ್ವದ ಪೀಠವು ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನಟ ಉಪೇಂದ್ರ ಪರ ವಕೀಲರು, ಉಪೇಂದ್ರ ಅವರು ಮಾತನಾಡುವಾಗ ಕನ್ನಡದ ನುಡಿಗಟ್ಟು ಬಳಿಸಿದ್ದಾರೆ. ಇದರಿಂದ ಯಾವುದೇ ದುರುದ್ದೇಶ ಇರಲಿಲ್ಲ. ಹೀಗಾಗಿ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿದರು. ಪ್ರಕರಣದ ವಿವರ ಆಲಿಸಿದ ಪೀಠವು ನಂತರ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಮಾಡಿತು.
ಉಪೇಂದ್ರ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಹಾಯಕ ಪೊಲೀಸ್‌ ಆಯುಕ್ತರು ನೀಡಿದ್ದ ನೋಟಿಸ್‌ಗೆ ಮಧ್ಯಂತರ ತಡೆ ವಿಧಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 13ಕ್ಕೆ ಮುಂದೂಡಿದೆ.
ಪ್ರಕರಣ ಏನು: ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡುವಾಗ ನುಡಿಗಟ್ಟೊಂದನ್ನು ಬಳಸಿದ್ದರು. ಇದರಿಂದ ದಲಿತ ಸಮುದಾಯದ ಜಾತಿ ಭಾವನೆಗಳಿಗೆ ಘಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ಅವರ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಕ್ರಮಕೈಗೊಳ್ಳಬೇಕು ಎಂದು ಸಮತಾ ಸೈನಿಕ ದಳದ ಮುಖಂಡರು ಮನವಿ ಮಾಡಿದ್ದರು. ಇದನ್ನು ಪರಿಶೀಲಿಸಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಭಾನುವಾರ ದೂರು ದಾಖಲಿಸಿದ್ದರು. ಉಪೇಂದ್ರ ಅವರು ಇದನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement