ಹೊಸ ಬಿಪಿಎಲ್-ಎಪಿಎಲ್ ಕಾರ್ಡ್‌ ಅರ್ಜಿ ಸಲ್ಲಿಕೆಗೆ ತಾತ್ಕಾಲಿಕ ತಡೆ: ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ

ಬೆಂಗಳೂರು : ಸದ್ಯಕ್ಕೆ ಬಿಪಿಎಲ್ ಕಾರ್ಡ್​​ ಹಾಗೂ ಎಪಿಎಲ್ ಕಾರ್ಡ್‌ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅನ್ನಭಾಗ್ಯ ಯೋಜನೆಯ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸರ್ವರ್‌ ಲಿಂಕ್‌ ಅನ್ನು ನಾವೇ ಓಪನ್ ಮಾಡಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಶೀಘ್ರದಲ್ಲಿಯೇ ತಿಳಿಸುತ್ತೇವೆ. ಇನ್ನೂ ಒಂದಷ್ಟು ದಿನ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಸಚಿವ ಮುನಿಯಪ್ಪ ತಿಳಿಸಿದರು.
ಈ ತಿಂಗಳ 25 ಅಥವಾ 26ರೊಳಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಸಂದಾಯವಾಗುತ್ತದೆ” ಎಂದ ಅವರು, ಜೋಳ, ರಾಗಿ, ಅಕ್ಕಿ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಅನ್ನಭಾಗ್ಯ ಯೋಜನೆಗೆ ಕೊರತೆಯಾಗಿರುವ ಅಕ್ಕಿಯನ್ನು ಪೂರೈಸಲು ತೆಲಂಗಾಣ ಮತ್ತು ಆಂಧ್ರಪ್ರದೇಶ ಮುಂದೆ ಬಂದಿವೆ. ದರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ತಿಂಗಳ ಕೊನೆಯೊಳಗೆ ಮಾತುಕತೆ ಅಂತಿಮವಾಗಲಿದೆ” ಎಂದು ತಿಳಿಸಿದರು.
ವಿಧಾನ ಪರಿಷತ್‌ಗೆ ಸುಧಾಮ ದಾಸ್‌ ನಾಮ ನಿರ್ದೇಶನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ಸುಧಾಮ್‌ ದಾಸ್‌ ನಾಮ ನಿರ್ದೇಶನಕ್ಕೆ ವಿರೋಧಿಸಿ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿರುವುದು ನಿಜ. ಸುಧಾಮ ದಾಸ್ ಮೂರು ತಿಂಗಳ ಹಿಂದಿನ ತನಕ ಸರ್ಕಾರಿ ಅಧಿಕಾರಿ ಆಗಿದ್ದರು. ಅವರು ಈಗಷ್ಟೇ ಪಕ್ಷಕ್ಕೆ ಬಂದಿದ್ದಾರೆ. ಇನ್ನೊಂದಿಷ್ಟು ದಿನಗಳ ಕಾಲ ಅವರು ಪಕ್ಷಕ್ಕೆ ಕೆಲಸ ಮಾಡಲಿ” ಎಂದು ಹೇಳಿದರು
30 ವರ್ಷಗಳ ಕಾಲದಿಂದ ಕೆಲಸ ಮಾಡಿದ ನಾಯಕರಿಗೆ ಅವಕಾಶ ನೀಡಬೇಕು ಎಂಬುದಷ್ಟೇ ನಮ್ಮ ಸಲಹೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಪತ್ರ ಬರೆದಿರುವುದು ಸತ್ಯ. ಉಳಿದಿದ್ದನ್ನು ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ. ಹೈಕಮಾಂಡ್ ನಾಯಕರ ನಿರ್ಧಾರ ಅಂತಿಮ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement