ನಟ ಚೇತನ್ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಸಮ್ಮತಿ

ಬೆಂಗಳೂರು : ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪದ ಸಂಬಂಧ ಕನ್ನಡ ಚಿತ್ರನಟ ಚೇತನ್‌ ವಿರುದ್ಧ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಈಚೆಗೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಒಪ್ಪಿಗೆ ನೀಡಿದ್ದಾರೆ.
ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ತೌಹೀದ್‌ ಜಮಾತ್‌ ಅಧ್ಯಕ್ಷ ಆರ್‌.ರಹಮತುಲ್ಲಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಚೇತನ್‌, ರಹಮತುಲ್ಲಾ, ಸಿಪಿಐ (ಎಂ) ನಾಯಕ ಸೀತಾರಾಂ ಯೆಚೂರಿ ಹಾಗೂ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಅಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ವಿರುದ್ಧ ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 15(1)(ಬಿ) ಅಡಿ ಕ್ರಮಕೈಗೊಳ್ಳಲು ಅನುಮತಿಸುವಂತೆ ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಗಿರೀಶ್‌ ಭಾರದ್ವಾಜ ಮನವಿ ಮಾಡಿದ್ದರು.

ತಮ್ಮ ಸಮ್ಮತಿ ಪತ್ರದಲ್ಲಿ ಅಡ್ವೊಕೇಟ್‌ ಜನರಲ್‌ ಅವರು, ನ್ಯಾಯಾಂಗ ನಿಂದನೆಗೆ ಕಾರಣವಾಗಿರುವ ನಟ ಚೇತನಕುಮಾರ ಅವರ ಟ್ವೀಟ್‌ನಲ್ಲಿ “ಕರ್ನಾಟಕ ಹೈಕೋರ್ಟ್‌ ತೀರ್ಪಿಗೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ನ್ಯಾ. ಕೃಷ್ಣ ದೀಕ್ಷಿತ್‌ ಅವರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದಾರೆ. ಈಗ ಅದೇ ನ್ಯಾಯಮೂರ್ತಿ ಶಾಲೆಗಳಲ್ಲಿ ಹಿಜಾಬ್‌ ಧರಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ತೀರ್ಮಾನಿಸಲಿದ್ದಾರೆ. ಅವರಿಗೆ ಇದಕ್ಕೆ ಅಗತ್ಯವಾದ ಸ್ಪಷ್ಟತೆ ಇದೆಯೇ?” ಎಂದು ಟ್ವೀಟ್‌ ಮಾಡಿದ್ದರು.
ಈ ಟ್ವೀಟ್‌ (ಚೇತನ್‌ ಅವರ ಟ್ವೀಟ್‌) ನ್ಯಾಯಮೂರ್ತಿಗಳ ಪ್ರಾಮಾಣಿಕತೆ, ಅರ್ಹತೆ ಮತ್ತು ನ್ಯಾಯಪರತೆಯ ಬಗ್ಗೆ ಜನತೆಯಲ್ಲಿ ಶಂಕೆಯನ್ನು ಮೂಡಿಸುತ್ತದೆ. ಇದು ನ್ಯಾಯಮೂರ್ತಿಗಳು ನ್ಯಾಯಿಕ ಕರ್ತವ್ಯ ನಿಭಾಯಿಸಲು ಮುಜುಗರದ ಸನ್ನಿವೇಶ ಸೃಷ್ಟಿಸುತ್ತದೆ. ಉಲ್ಲೇಖಿಸಲಾಗಿರುವ ಟ್ವೀಟ್‌ ಸೂಕ್ತವಲ್ಲದ ಉದ್ದೇಶವನ್ನು ನ್ಯಾಯಮೂರ್ತಿಗಳಿಗೆ ಆರೋಪಿಸುತ್ತದೆ. ಹೀಗಾಗಿ, ನಟ ಚೇತನ್‌ ಮಾಡಿರುವ ಟ್ವೀಟ್‌ ಕಾಯಿದೆಯ ಸೆಕ್ಷನ್‌ 2(ಸಿ) ಅಡಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆಗೆ ಸಮನಾಗಿದೆ. ಈ ನೆಲೆಯಲ್ಲಿ ಚೇತನ್‌ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅರ್ಜಿದಾರರಿಗೆ ಅನುಮತಿಸಿದ್ದೇನೆ ಎಂದು ಅಡ್ವೊಕೇಟ್‌ ಜನರಲ್‌ ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಹಿಜಾಬ್‌ ತೀರ್ಪಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ಕೊಲೆಯಾದರೆ ಅವರ ಸಾವಿಗೆ ಅವರೇ ಜವಾಬ್ದಾರಿ. ಕೇಂದ್ರ ಸಚಿವ ಅಮಿತ್‌ ಶಾ ಸೂಚನೆಯಂತೆ ಹೈಕೋರ್ಟ್‌ ತೀರ್ಪು ನೀಡಿದೆ” ಎಂದು ಮದುರೈನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ತೌಹೀದ್‌ ಜಮಾತ್‌ನ ರಹಮತುಲ್ಲಾ ನೀಡಿದ್ದ ಹೇಳಿಕೆಯು ನ್ಯಾಯಾಂಗಯ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ) ಅಡಿ ನಿಂದನೆಗೆ ಸಮನಾಗಿದೆ. ಈ ರೀತಿಯ ಹೇಳಿಕೆಯ ಮೂಲಕ ಅವರು ನ್ಯಾಯಾಂಗದ ಸ್ವಾತಂತ್ರ್ಯ, ಪ್ರಾಮಾಣಿಕತೆ ಮತ್ತು ನ್ಯಾಯಿಕ ಸಾಮರ್ಥ್ಯ ಹಾಗೂ ನ್ಯಾಯಮೂರ್ತಿಗಳ ನಿಷ್ಪಕ್ಷಪಾತ ನಿಲುವಿನ ಮೇಲೆ ದಾಳಿ ಮಾಡುವುದರ ಜೊತೆಗೆ ನ್ಯಾಯಾಂಗದ ಘನತೆಗೆ ಕುಂದುಂಟು ಮಾಡಲಾಗಿದೆ ಎಂದು ವಿವರಿಸಲಾಗಿದೆ.
ಯೆಚೂರಿ ಮತ್ತು ಅತಾವುಲ್ಲಾ ಅವರು ತೀರ್ಪನ್ನು ಟೀಕಿಸಿದ್ದಾರೆಯೇ ವಿನಾ ತೀರ್ಪು ನೀಡಿರುವ ನ್ಯಾಯಮೂರ್ತಿಗಳ ಮೇಲೆ ದಾಳಿ ನಡೆಸಿಲ್ಲ. ಹೀಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕೋರಿರುವ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ ವಿವರಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement