ಕಾಂಗ್ರೆಸ್‌ ಸೇರುವುದಾಗಿ ಪ್ರಕಟಿಸಿದ ಆಯನೂರು ಮಂಜುನಾಥ

ಬೆಂಗಳೂರು: ಕಾಂಗ್ರೆಸ್​​ನ ಆಪರೇಷನ್ ಹಸ್ತ ಭಾರೀ ಚರ್ಚೆಯಲ್ಲಿರುವಾಗಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದಾಗಿ ಮಾಜಿ ವಿಧಾನ ಪರಿಷತ್‌ ಸದಸ್ಯ ಹಾಗೂ ಜೆಡಿಎಸ್‌ ಮುಖಂಡ ಆಯನೂರು ಮಂಜುನಾಥ ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರನ್ನು ಭೇಟಿಯಾದ ಬಗ್ಗೆ ಮಾಧ್ಯದವರ ಪ್ರಶ್ನೆಗೆ ಉತ್ತರಿಸಿದ ಅವರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆʼʼ ಎಂದು ತಿಳಿಸಿದರು.
ಭಾನುವಾರ ಸದಾಶಿವನಗರ ನಿವಾಸದಲ್ಲಿ ಡಿ ಕೆ ಶಿವಕುಮಾರ ಅವರನ್ನು ಭೇಟಿ ಮಾಡಿದ ಆಯನೂರು ಮಂಜುನಾಥ ಕೆಲ ಕಾಲ ಮಾತುಕತೆ ನಡೆಸಿದ್ದರು.
ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಆಯನೂರು ಮಂಜುನಾಥ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ವಿಧಾನಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಆಯನೂರು ಮಂಜುನಾಥ ಅದಕ್ಕಾಗಿ ವಿಧಾನ ಪರಿಷತ್‌ನ ತಮ್ಮ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅವರಿಗೆ ಕಾಂಗ್ರೆಸ್‌ ಸೇರಲು ಆಗಿರಲಿಲ್ಲ. ಹೀಗಾಗಿ ಜೆಡಿಎಸ್‌ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರು.
ಈ ಹಿಂದೆ ನಾನು ಬಿಜೆಪಿ ಬಿಡಬೇಕು ಎಂದು ನಿರ್ಧಾರ ಮಾಡಿದ್ದಾಗ ಕಾಂಗ್ರೆಸ್ಸಿನಲ್ಲಿ ಅವಕಾಶ ಇರಲಿಲ್ಲ. ಆಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವಕಾಶ ನೀಡಿದ್ದರು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಅಧ್ಯಕ್ಷರ ಜೊತೆ ಒಂದು ಹಂತದ ಮಾತುಕತೆಯಾಗಿದೆ. ನಾನು ವಿಧಾನ ಪರಿಷತ್ ಆಕಾಂಕ್ಷಿಯಾಗಿದ್ದೇನೆ, ಆದರೆ ಕಾಂಗ್ರೆಸ್‌ ಸೇರ್ಪಡೆಯಾಗುವಾಗ ಯಾವುದೇ ಷರತ್ತನ್ನು ಹಾಕುವುದಿಲ್ಲ. ಪಕ್ಷ ಟಿಕೆಟ್ ನೀಡಿದರೆ ಸಂತೋಷದಿಂದ ಸ್ಪರ್ಧಿಸುತ್ತೇನೆ ಎಂದರು.

ಪ್ರಮುಖ ಸುದ್ದಿ :-   ಎಚ್.ಡಿ ರೇವಣ್ಣ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement