ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ದೆಹಲಿ ಅಧಿಕಾರಿಯಿಂದ ಅತ್ಯಾಚಾರ ; ಗರ್ಭಪಾತ ಮಾತ್ರೆಗಳನ್ನು ನೀಡಿದ ಹೆಂಡತಿ : ಪ್ರಕರಣ ದಾಖಲು

ನವದೆಹಲಿ: 2020 ಮತ್ತು 2021ರ ನಡುವೆ ತನ್ನ ಸ್ನೇಹಿತನ ಮಗಳ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಕ್ಕಾಗಿ ಪೋಕ್ಸೊ ಕಾಯ್ದೆಯಡಿ ದೆಹಲಿ ಸರ್ಕಾರಿ ಅಧಿಕಾರಿಯ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯು ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹುದ್ದೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಈ ಅಪರಾಧದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆತನ ಪತ್ನಿಯ ಮೇಲೂ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ.
ಬಾಲಕಿ 12ನೇ ತರಗತಿ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಆಕೆ 2020 ರಲ್ಲಿ ಆಕೆಯ ತಂದೆ ತೀರಿಕೊಂಡ ನಂತರ ಆರೋಪಿ ಅಧಿಕಾರಿ ಅವಳನ್ನು ತನ್ನ ಮನೆಗೆ ಕರೆತಂದಿದ್ದ ಎಂದು ಹೇಳಲಾಗಿದೆ.
ಎಫ್‌ಐಆರ್‌ನ ಪ್ರಕಾರ, ಅಧಿಕಾರಿ 2020 ರಿಂದ 2021 ರವರೆಗೆ ಅಪ್ರಾಪ್ತ ಬಾಲಕಿ ಮೇಲೆ ಅನೇಕ ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಗೆ ತಾನು ಗರ್ಭಿಣಿ ಎಂದು ಪತ್ತೆಯಾದಾಗ, ಅವಳು ಅಧಿಕಾರಿ ಹೆಂಡತಿಗೆ ತಿಳಿಸಿದಳು. ಆದಾಗ್ಯೂ, ಅಪರಾಧವನ್ನು ವರದಿ ಮಾಡುವ ಬದಲು, ವಿಷಯವನ್ನು ಮುಚ್ಚಿಡಲು ಹೆಂಡತಿ ಪ್ರಯತ್ನ ಪಟ್ಟಳು ಹಾಗೂ ಅಧಿಕಾರಿಯ ಪತ್ನಿ ತಮ್ಮ ಮಗನಿಂದ ಔಷಧಿ ತರಿಸಿ ಮನೆಯಲ್ಲಿಯೇ ಗರ್ಭಪಾತ ಮಾಡಿಸಿದ್ದಾಳೆ ಎಂದು ಅಪ್ರಾಪ್ತ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement