ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮೊದಲೇ 115 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿಎಂ ಕೆಸಿಆರ್ ಪಕ್ಷ

ಹೈದರಾಬಾದ್‌ : 2023 ರ ಅಂತ್ಯದ ವೇಳೆಗೆ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮುಂಚಿತವಾಗಿ ಭಾರತ್ ರಾಷ್ಟ್ರ ಸಮಿತಿ (BRS) 119 ಕ್ಷೇತ್ರಗಳ ಪೈಕಿ 115 ಸ್ಥಾನಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೈದರಾಬಾದ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ತೆಲಂಗಾಣ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಆರ್‌ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಪಕ್ಷದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ಪ್ರಸ್ತುತ ಗಜ್ವೇಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಚಂದ್ರಶೇಖರ ರಾವ್ ಈ ಬಾರಿ ಅದರ ಜೊತೆಗೆ ಕಾಮರೆಡ್ಡಿ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ. 115 ಸ್ಥಾನಗಳಿಗೆ 114 ಹೆಸರುಗಳನ್ನು ಘೋಷಿಸಲಾಗಿದೆ. ಏಳು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. 119 ಸದಸ್ಯರ ತೆಲಂಗಾಣ ವಿಧಾನಸಭೆಯಲ್ಲಿ ಬಿಆರ್‌ಎಸ್ ಪ್ರಸ್ತುತ 104 ಶಾಸಕರನ್ನು ಹೊಂದಿದೆ.
ಹಾಲಿ ಶಾಸಕರಿಗೆ ಟಿಕೆಟ್ ಸಿಗದ ಏಳು ಕ್ಷೇತ್ರಗಳೆಂದರೆ ವೇಮುಲವಾಡ, ಬೋತ್, ಸ್ಟೇಷನ್ ಘನಪುರ, ಆಸಿಫಾಬಾದ್, ವೈರಾ, ಕೋರುಟ್ಲಾ ಮತ್ತು ಉಪ್ಪಳ. ಕಾಮರೆಡ್ಡಿ ಶಾಸಕ ಗಂಪ ಗೋವರ್ಧನ್ ಅವರು 115 ಸ್ಥಾನಗಳ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ನಾಂಪಲ್ಲಿ, ನರಸಾಪುರ, ಗೋಶಾಮಹಲ್ ಮತ್ತು ಜನಾಂವ್ ನಾಲ್ಕು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ನಂತರ ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಬಾರಿ ಬಿಆರ್‌ಎಸ್ 95 ರಿಂದ 105 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಕೆಸಿಆರ್ ಹೇಳಿದ್ದಾರೆ. 2018 ರಲ್ಲಿ, BRS ಆರಂಭದಲ್ಲಿ 88 ಸ್ಥಾನಗಳನ್ನು ಗೆದ್ದಿತ್ತು. ನಂತರ, ಕಾಂಗ್ರೆಸ್, ಟಿಡಿಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳ ಹಲವಾರು ಶಾಸಕರು ಬಿಆರ್‌ಎಸ್‌ಗೆ ಸೇರ್ಪಡೆಗೊಂಡ ನಂತರ ವಿಧಾನಸಭೆಯಲ್ಲಿ ಅದರ ಬಲ ಹೆಚ್ಚಳವಾಯಿತು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ವೇಮುಲವಾಡ ಶಾಸಕ ಚೆನ್ನಮನೇನಿ ರಮೇಶ ಅವರ ಭಾರತೀಯ ಪೌರತ್ವ ವಿವಾದದಲ್ಲಿರುವುದರಿಂದ ಅವರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕೆಸಿಆರ್ ಹೇಳಿದ್ದು, ಚಲ್ಮೇಡ ಲಕ್ಷ್ಮೀ ನರಸಿಂಹರಾವ್ ಅವರಿಗೆ ಟಿಕೆಟ್ ನೀಡಲಾಗಿದೆ. ಕೋರುಟ್ಲಾದಲ್ಲಿ ಹಾಲಿ ಶಾಸಕ ಕಲ್ವಕುಂಟ್ಲ ವಿದ್ಯಾಸಾಗರ ರಾವ್ ಅವರು ತಮ್ಮ ಪುತ್ರ ಸಂಜಯ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದು, ಇದು ಮನೆಯ ಸಮಸ್ಯೆ ಎಂದು ಕೆಸಿಆರ್ ಹೇಳಿದ್ದಾರೆ. ಉಪ್ಪಳದಲ್ಲೂ ಹಾಲಿ ಶಾಸಕ ಬೇತಿ ಸುಭಾಸ್ ರೆಡ್ಡಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಬಂಡಾರಿ ಲಕ್ಷ್ಮಣರೆಡ್ಡಿ ಅವರಿಗೆ ಟಿಕೆಟ್ ಸಿಕ್ಕಿದೆ.

ಟಿಕೆಟ್ ನಿರಾಕರಿಸಿದ ಇತರ ಹಾಲಿ ಶಾಸಕರೆಂದರೆ ಬೋತ್ ಶಾಸಕ ರಾಥೋಡ್ ಬಾಪು ರಾವ್ ರಾಜಯ್ಯ, ಆಸಿಫಾಬಾದ್ ಶಾಸಕ ಅತ್ರಂ ಸಕ್ಕು ಮತ್ತು ವೈರಾ ಶಾಸಕ ಲಾವುಡ್ಯ ರಾಮುಲು ನಾಯ್ಕ್ ಆಗಿದ್ದಾರೆ. ಅವರ ಸ್ಥಾನದಲ್ಲಿ ಕ್ರಮವಾಗಿ ಅನಿಲ ಜಾಧವ್, ಕಡಿಯಂ ಶ್ರೀಹರಿ, ಕೋವ ಲಕ್ಷ್ಮಿ ಮತ್ತು ಬಾನೋತ್ ಮದನಲಾಲ್ ಅವರಿಗೆ ಟಿಕೆಟ್ ನೀಡಲಾಗಿದೆ.
2018ರ ವಿಧಾನಸಭೆ ಚುನಾವಣೆಗೂ ಮುನ್ನ, BRS (ಆಗ ಟಿಆರ್‌ಎಸ್) ತನ್ನ ಮೊದಲ ಪಟ್ಟಿಯನ್ನು ಇತರ ಪ್ರಮುಖ ಪಕ್ಷಗಳಿಗಿಂತ ಮುಂಚಿತವಾಗಿ ಬಿಡುಗಡೆ ಮಾಡಿತ್ತು. ಡಿಸೆಂಬರ್‌ನಲ್ಲಿ ನಡೆದ ಚುನಾವಣೆಗೆ ಮೂರು ತಿಂಗಳ ಮೊದಲು 105 ಅಭ್ಯರ್ಥಿಗಳನ್ನು ಹೆಸರಿಸಿತ್ತು. ಆ ವರ್ಷ, ಮುಖ್ಯಮಂತ್ರಿ ಕೆಸಿಆರ್ ತನ್ನ ಸರ್ಕಾರದ ಅವಧಿಯು ಮೇ 2019 ರಲ್ಲಿ ಕೊನೆಗೊಳ್ಳುವ ಎಂಟು ತಿಂಗಳ ಮೊದಲು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿದ್ದರು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement