ಕಾವೇರಿ-ಮಹದಾಯಿ ಜಲ ವಿವಾದದ ಬಗ್ಗೆ ಚರ್ಚಿಸಲು ನಾಳೆ ಸರ್ವಪಕ್ಷಗಳ ಸಭೆ

ಬೆಂಗಳೂರು : ಕಾವೇರಿ ಹಾಗೂ ಮಹದಾಯಿ ಜಲವಿವಾದಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಬುಧವಾರ (ಆಗಸ್ಟ್‌ 23) ರಂದು ಕರೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಸಭೆಗೆ ಹಾಜರಾಗಿ ತಮ್ಮ ಸಲಹೆ ನೀಡುವಂತೆ ಸಂಸದರು, ಸರ್ವಪಕ್ಷಗಳ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ಮುಖ್ಯಮಂತ್ರಿ ಕಚೇರಿಯಿಂದ ಪತ್ರದ ಮೂಲಕ ಆಹ್ವಾನ ನೀಡಲಾಗಿದೆ. ಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟು, ಮಹದಾಯಿ ಜಲವಿವಾದ ಹಾಗೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಕುರಿತು ಸರ್ವಪಕ್ಷಗಳ ಸಭೆ ಕರೆಯಲಾಗಿದೆ.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆಗಸ್ಟ್ 31 ರವರೆಗೂ ನೀರು ಬಿಡಬೇಕೆಂದು ಸೂಚನೆ ನೀಡಿರುವುದು, ಸೂಚನೆಯಂತೆ ತಮಿಳುನಾಡಿಗೆ ಕಬಿನಿ ಮತ್ತು ಕೆಆರ್‍ಎಸ್ ಜಲಾಶಯದಿಂದ ನೀರು ಹರಿಸಿರುವುದು, ತಮಿಳುನಾಡು ತಕರಾರು ತೆಗೆದು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿರುವ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ತಮಿಳುನಾಡಿಗೆ ಕೆಆರ್‍ಎಸ್‍ನಿಂದ ನೀರು ಬಿಟ್ಟಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಗೂ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರವಾಗಿ ವಿರೋಧಿಸಿವೆ. ತಮಿಳುನಾಡಿಗೆ ನೀರು ಬಿಡಲು ರಾಜ್ಯದಲ್ಲಿ ಸಾಕಷ್ಟು ನೀರಿಲ್ಲದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಪ್ರಮುಖ ಸುದ್ದಿ :-   ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement